ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಅನುಮತಿ ಇಲ್ಲದೆ ಯೋಜನಾ ಪ್ರದೇಶದಲ್ಲಿ ಒಂದು ಇಟ್ಟಿಗೆಯೂ ಅಲುಗಾಡುವಂತಿಲ್ಲ, ಒಂದು ಮರವನ್ನೂ ಕಡಿಯುವಂತಿಲ್ಲ ಎಂದು ಹೈಕೋರ್ಟ್ ರಾಜ್ಯಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ನಾಲ್ವರು ರೈತರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಸರ್ಕಾರ ಪರಿಹಾರ ಮೊತ್ತವನ್ನು ನಿಗದಿಪಡಿಸಿದ ತಕ್ಷಣವೇ ಬುಲ್ಡೋಜರ್ ತೆಗೆದುಕೊಂಡು ಹೋಗಲಾಗದು, ರಾತ್ರೋರಾತ್ರಿ ಆಸ್ತಿ ನಾಶಪಡಿಸುವ ಕೆಲಸಕ್ಕೆ ಸರ್ಕಾರ ಕೈಹಾಕಬಾರದು ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಪರಿಹಾರ ಮೊತ್ತ ಪ್ರಕಟವಾದರೂ ಕೂಡ ಹೈಕೋರ್ಟ್ ಅನುಮತಿ ಪಡೆಯದೆ ಕೃಷಿಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಸೂಚನೆ ನೀಡಿದೆ.
ಹೆಚ್ಚಿನ ರೈತರು ಭೂಮಿ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ವಾಸ್ತವದಲ್ಲಿ ಶೇ. 5ರಷ್ಟು ರೈತರೂ ಭೂಮಿ ನೀಡಲು ಒಪ್ಪಿಲ್ಲ ಎಂದು ರೈತರ ಪರ ವಕೀಲರು ವಾದ ಮಂಡಿಸಿದರು.


