Menu

ಕ್ಷುಲ್ಲಕ ಜಗಳ: ಬ್ರಹ್ಮಾವರದಲ್ಲಿ ತಂದೆ,ತಾಯಿಯ ಹತ್ಯೆಗೈದ ಮಗ

ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಮಗನೊಬ್ಬ ತಂದೆ–ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಉಡುಪಿಯ ಬ್ರಹ್ಮಾವರದ ಗಾಂಧಿನಗರದಲ್ಲಿ ನಡೆದಿದೆ.

ಗಾಂಧಿನಗರ ನಿವಾಸಿಗಳಾದ ಮೆಹಬೂಬ್ ಅಲಿ ಹಾಗೂ ಅವರ ಪತ್ನಿ ಶಂಶಾದ್ ಬೇಗಂ ಹತ್ಯೆಗೀಡಾದವರು. ಮಗ ಶಾಹಿದ್ ಅಲಿ (31) ಕೊಲೆ ಆರೋಪಿಯಾಗಿದ್ದು, ಬ್ರಹ್ಮಾವರ ಪೊಲೀಸರು  ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೆಹಬೂಬ್ ಅಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಾಹಿದ್ ಅಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಭಾನುವಾರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ತಂದೆ–ತಾಯಿಯೊಂದಿಗೆ ಜಗಳವಾಡಿದ ಶಾಹಿದ್, ಸುತ್ತಿಗೆಯಿಂದ ಇಬ್ಬರ ಮೇಲೂ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹತ್ಯೆಯ ಬಳಿಕ ಶಾಹಿದ್‌ನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಆಟವಾಡುತ್ತ ಟ್ರ್ಯಾಕ್ಟರ್‌ ಆನ್‌ ಮಾಡಿದ ಮಗು: ತಂದೆ ಮೇಲೆ ಹರಿದು ಸಾವು

ಮೂರು ವರ್ಷದ ಮಗು ಕೀಯಲ್ಲಿ ಆಟವಾಡುತ್ತ ಟ್ರ್ಯಾಕ್ಟರ್‌ ಆನ್‌ ಮಾಡಿದ್ದು, ಚಕ್ರ ಹರಿದು ತಂದೆ ಮೃತಪಟ್ಟ ಘಟನೆ ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ನಡೆದಿದೆ. ಯಶ್ವಂತ್ (37) ಟ್ರಾಕ್ಟರ್ ಹರಿದು ಮೃತಪಟ್ಟವರು, ಸಾರಿಗೆ ಸಂಸ್ಥೆಯ ನೌಕರರಾಗಿದ್ದ ಅವರು ಅರಕಲಗೂಡು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಹೊಸ ಮನೆ ಕಟ್ಟಿಸುತ್ತಿದ್ದ ಯಶ್ವಂತ್‌, ಆರ್‌ಸಿಸಿಗಾಗಿ ಟ್ರ್ಯಾಕ್ಟರ್‌ನಲ್ಲಿ ಸೆಂಟ್ರಿಂಗ್ ಸಾಮಾಗ್ರಿಗಳನ್ನು ತರಿಸಿದ್ದರು. ಮಗುವನ್ನು ಆಟವಾಡಿಸುತ್ತಾ ಟ್ರ್ಯಾಕ್ಟರ್‌ ಮೇಲೆ ಕೂರಿಸಿದ್ದರು. ಮಗು ಆಟವಾಡುತ್ತ ಟ್ರ್ಯಾಕ್ಟರ್‌ ಕೀ ಆನ್‌ ಮಾಡಿದ್ದು, ಟ್ರ್ಯಾಕ್ಟರ್‌ ಏಕಾಏಕಿ ಮುಂದಕ್ಕೆ ಚಲಿಸಿದೆ.

ಮಗು ಕೆಳಗೆ ಬೀಳುತ್ತದೆ ಎಂದು ಗಾಬರಿಯಲ್ಲಿ ರಕ್ಷಿಸಲು ಬಂದ ಯಶ್ವಂತ್‌ ಮೇಲೆ ಟ್ರ್ಯಾಕ್ಟರ್‌ ಚಕ್ರ ಹರಿದಿದೆ. ಗಾಯಗೊಂಡ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೊಳೆನರಸೀಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *