ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಸಮೀಪ ಕಣಜ ಹುಳು ಕಡಿದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಎರಡನೇ ತರಗತಿ ಓದುತ್ತಿದ್ದ ನಿಶ್ಚಿತ್ ಮೃತಪಟ್ಟ ಬಾಲಕ.
ಅತ್ತಿಸರದಲ್ಲಿ ಈ ದುರಂತ ನಡೆದಿದ್ದು, ಮನೆಯ ಹಿಂದಿನ ಬಾಳೆ ಗಿಡದಲ್ಲಿ ಕಣಜ ಹುಳುವಿನ ಗೂಡು ಇತ್ತು. ತಂದೆ ವೆಂಕಟೇಶ್ ಹಾಗೂ ಬಾಲಕ ನಿಶ್ಚಿತ್ ಮೇಲೆ ಹುಳುಗಳು ದಾಳಿ ನಡೆಸಿವೆ.
ಕೂಡಲೇ ಇಬ್ಬರನ್ನೂ ಹೆಗ್ಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಿಸದೆ ಬಾಲಕ ನಿಶ್ಚಿತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಂದೆ ವೆಂಕಟೇಶ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಣಜದ ಹುಳು ಎಂದು ಹೇಳಲಾಗುವ ಕೀಟದ ಕಡಿತ ಅತೀವ ನೋವು ಮತ್ತು ನಂಜಿನಿಂದ ಕೂಡಿರುತ್ತದೆ. ಚ್ಚಿದರೆ ತೀವ್ರವಾದ ಉರಿ, ನೋವು ಮತ್ತು ಊತ ಉಂಟಾಗುತ್ತದೆ. ಕಚ್ಚಿದ ಜಾಗಕ್ಕೆ ತಕ್ಷಣ ಐಸ್ ಪ್ಯಾಕ್ ಅಥವಾ ಅಲೋವೆರಾ ಜೆಲ್ ಹಚ್ಚುವುದರಿಂದ ಉರಿ ಮತ್ತು ಊತ ಕಡಿಮೆ ಆಗುತ್ತದೆ. ಇದರ ಗೂಡುಗಳು ಮನೆಯ ಹತ್ತಿರವಿದ್ದರೆ ಅಥವಾ ಹೆಚ್ಚು ಸಂಖ್ಯೆಯಲ್ಲಿದ್ದರೆ ಸುರಕ್ಷಿತವಾಗಿ ತೆರವುಗೊಳಿಸುವ ಕೆಲಸವನ್ನು ಮಾಡುವುದು ಉತ್ತಮ.


