Menu

ಬಿಡದಿ ಟೌನ್ ಶಿಪ್: ಸತ್ಯ ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲವೆಂದ ಸಿಎಂ 

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಅಧಿವೇಶನದಲ್ಲಿ ಬಂದು ಚರ್ಚೆ ಮಾಡಲಿ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಕೆಪಿಸಿಸಿ ಭಾರತ ಜೋಡೋ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ಹಾಗೂ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಕೇಳಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ, ಪಾದಯಾತ್ರೆ ಮಾಡುವ ಹಕ್ಕಿದೆ. ಅವರು ಏನುಬೇಕಾದರೂ ಮಾಡಲಿ. ಅಧಿವೇಶನದಲ್ಲಿ ಬಂದು ಮಾತನಾಡಲಿ. ಎಲ್ಲೆಲ್ಲಿ ದೂರು ನೀಡುತ್ತಾರೋ ನೀಡಲಿ, ನಾವು ಯಾರಿಗೂ ಬಲವಂತ ಮಾಡುತ್ತಿಲ್ಲ. ಯಾವ ಸಂದರ್ಭದಯಾವ ಉತ್ತರ ಕೊಡಬೇಕೋ ಕೊಡುತ್ತೇವೆ ಎಂದು ಉತ್ತರಿಸಿದರು.

ಕ್ವಿಟ್ ವೋಟ್ ಚೋರಿ ಚಳುವಳಿ ಮಾಡಬೇಕಿದೆ

ದೇಶದಲ್ಲಿ ಮತಗಳ್ಳತನ ನಡೆಯುತ್ತಿದ್ದು, ಇದರ ವಿರುದ್ಧ ನಾವು ಕ್ವಿಟ್ ವೋಟ್ ಚೋರಿ ಚಳುವಳಿ ಮಾಡಬೇಕಿದೆ ಎಂದು ಸಿಎಂ ಹೇಳಿದರು. ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ  ನಡೆದ ಕ್ವಿಟ್ ಇಂಡಿಯಾ ದಿನ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಮತದಾನದ ಹಕ್ಕು, ಬದುಕಿನ ಹಕ್ಕು, ಹೀಗಾಗಿ ಅದನ್ನು ಉಳಿಸಿಕೊಳ್ಳಿ ಎಂದ ಸಿಎಂ, ನೀವು ಎಲ್ಲಾ ಕೆಲಸ ಬದಿಗಿಟ್ಟು ಮತಗಳ್ಳತನ ವಿರುದ್ಧ ಹೋರಾಟ ಮಾಡಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ರಾಜ್ಯದ ಕಾರ್ಯಕರ್ತರಲ್ಲಿ ಮನವಿ ಮಾಡುವೆ. ರಾಜ್ಯದಲ್ಲಿ ಎಸ್ ಐಆರ್ ನಡೆಯುತ್ತಿದ್ದು, ರಾಜ್ಯದಲ್ಲಿ 1 ಕೋಟಿ ಮತದಾರರನ್ನು ಡಿಲೀಟ್ ಮಾಡಲು ಪ್ರಯತ್ನ ನಡೆಯುತ್ತಿದೆ. ನೀವು ನಿಮ್ಮ ಮತಗಳನ್ನು ಉಳಿಸಿಕೊಳ್ಳಬೇಕು. ಬದುಕಿಗಾಗಿ ಮತದಾನದ ಹಕ್ಕು ಉಳಿಸಿಕೊಳ್ಳಬೇಕು ಎಂದು ನಮ್ಮ ಕಾರ್ಯಕರ್ತರು ಹಾಗೂ ಬಿಎಲ್ಎ2ಗಳಿಗೆ ಮನವಿ ಮಾಡುತ್ತಿದ್ದೇವೆ. ನಾವು ಗ್ಯಾರಂಟಿ ಯೋಜನೆಗಳನ್ನು ಜನರಿಗಾಗಿ ನೀಡಿದ್ದು, ಮತದಾನದ ಹಕ್ಕು ಇಲ್ಲದವರಿಗೆ ಈ ಯೋಜನೆಗಳು ಲಭ್ಯವಾಗುವುದು ಕಷ್ಟವಾಗುತ್ತದೆ. ಗಣತಿ ನಮೂನೆ ತುಂಬಿ ಹಿಂತಿರುಗಿಸಿ. ಎಲ್ಲರಿಗೂ ಬಿಎಲ್ಎ2 ಆಗಲು ಸಾಧ್ಯವಿಲ್ಲ. ನಿಮಗೆ ಸಿಕ್ಕಿರುವ ಅವಕಾಶವನ್ನು ಉಳಿಸಿಕೊಳ್ಳಬೇಕು. ರಾಹುಲ್ ಗಾಂಧಿ ಅವರನ್ನು ಈ ದೇಶದ ಪ್ರಧಾನಿ ಮಾಡಲು  ಇದು ಪೂರಕ ಹೆಜ್ಜೆಯಾಗಲಿದೆ ಎಂದರು.

18 ವರ್ಷ ತುಂಬಿರುವ ಯುವಕರಿಗೆ ಫಾರಂ 6 ಮೂಲಕ ಮತದಾನದ ಹಕ್ಕನ್ನು ಪಡೆಯಲು ಮುಂದಾಗಿ. ಮತದಾನದ ಹಕ್ಕಿಲ್ಲ ಎಂದರೆ ನಿಮಗೆ ಧ್ವನಿ ಇರುವುದಿಲ್ಲ. ರಾಜೀವ್ ಗಾಂಧಿ ಅವರು ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದಾಗ ಎಲ್ಲ ವಿರೋಧ ಪಕ್ಷದವರು ವಿರೋಧಿಸಿದರು. ಆದರೆ ರಾಜೀವ್ ಗಾಂಧಿ ಅವರು 10ನೇ ತರಗತಿ ಪಾಸಾದ ವಿದ್ಯಾರ್ಥಿಗೆ ದೇಶ ಕಾಯುವ ಜವಾಬ್ದಾರಿ ನೀಡುತ್ತಿರುವಾಗ ಮತದಾನದ ಹಕ್ಕು ಯಾಕೆ ನೀಡಬಾರದು ಎಂದು ಪ್ರಶ್ನಿಸಿದ್ದರು ಎಂದರು.

ನಾನು ಮುಖ್ಯಮಂತ್ರಿಯಾಗಿದ್ದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಕಾರ್ಯಕರ್ತರಿದ್ದರೆ ಪಕ್ಷ, ಪಕ್ಷ ಇದ್ದರೆ ಸರ್ಕಾರ.  ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದ ಪವಿತ್ರವಾದ ದಿನ. ಕಾಂಗ್ರೆಸ್ ಕಚೇರಿ ಭಾರತ ಜೋಡೋ ಭವನದಲ್ಲಿ  ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂದು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯ ಮೊಳಗಿತ್ತು, ಇಂದು ಸರ್ವಾಧಿಕಾರಿ ಮನಸ್ಥಿತಿ ಅಧಿಕಾರ ಬಿಟ್ಟು ತೊಲಗಿ ಎಂದು ಘೋಷವಾಕ್ಯ ಕೂಗಬೇಕಿದೆ. ಅಂದು ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು, ಇಂದು ಪ್ರತಿಭಟನೆ ನಮ್ಮ ಜನ್ಮಸಿದ್ಧ ಹಕ್ಕು ಎಂದು ಹೇಳಬೇಕಾಗಿದೆ. ಗಾಂಧಿಜಿ ಅವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಸಂಕಲ್ಪ ಮಾಡಿದ ದಿನ. ನೆಹರು, ಸರ್ದಾರ್ ಪಟೇಲ್, ಮೌಲಾನ ಅಬುಲ್ ಕಲಾಂ ಸೇರಿದಂತೆ ಎಲ್ಲಾ ನಾಯಕರು ಈ ಚಳುವಳಿಯಲ್ಲಿ ಹೆಜ್ಜೆ ಹಾಕಿದ್ದರು ಎಂದು ಸ್ಮರಿಸಿದರು.

ಜನಾರ್ದನ ಪೂಜಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾಗ ನಮ್ಮನ್ನು ಗುಜರಾತಿಗೆ ಕರೆದುಕೊಂಡು ಹೋಗಿದ್ದು,   ಆ ಪವಿತ್ರವಾದ ಭೂಮಿಯಲ್ಲಿ ಹೆಜ್ಜೆ ಹಾಕಿದ್ದೆವು. ಹಿರಿಯರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ವ್ಯವಸ್ಥೆ, ಸಮಾನತೆಯಿಂದ ಬಾಳುವ ಅವಕಾಶ ಸಿಕ್ಕಿದೆ. ಸಂವಿಧಾನವೇ ನಮಗೆ ಬೈಬಲ್, ಕುರಾನ್, ಭಗವದ್ಗೀತೆಯಾಗಿದೆ ಎಂದರು.

ನಮ್ಮ ಗುರಿ 2028 ಹಾಗೂ 2029 ಆಗಿದೆ. ಕಾಂಗ್ರೆಸ್ ಮುಕ್ತ ಮಾಡಲು ಕೆಲವು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಹೀಗಾಗಿ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣದಲ್ಲಿ ಸಾಧ್ಯವಾಯಿತಾ, ಇಲ್ಲ ಎಂದು ಹೇಳಿದರು.

ನಮ್ಮ ಪಾಲಿಗೆ ಕಾಂಗ್ರೆಸ್ ಕಚೇರಿ, ಇಂದಿರಾ ಭವನ, ರಾಜೀವ್ ಭವನ, ಪ್ರಿಯದರ್ಶಿನಿ ಭವನ ದೇವಾಲಯ ಸ್ವರೂಪ. ಹೀಗಾಗಿ ಕಾಂಗ್ರೆಸ್ ಕಚೇರಿಗೆ ಹೊಸರೂಪ ನೀಡಲು ಮುಂದಾಗಿದ್ದೇವೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಬಂದು ಶಂಕುಸ್ಥಾಪನೆ ಮಾಡಲಿದ್ದಾರೆ. ಕಾಂಗ್ರೆಸ್ ಭವನ ಜಾಗದಲ್ಲಿ ಭೂಮಿಪೂಜೆ ಮಾಡಲಾಗುವುದು. ಆ ದಿನ ನೂರು ಕಚೇರಿ ನಿರ್ಮಾಣ ಮಾಡುವ ಜಾಗದಲ್ಲಿ ಕಾರ್ಯಕ್ರಮ ಮಾಡಲಾಗುವುದು. ಅಂದು ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ ನೂರು ಜನ ಹಿರಿಯ ನಾಯಕರನ್ನು (70 ವರ್ಷ ಮೇಲ್ಪಟ್ಟವರು) ಗುರುತಿಸಿ ಅವರಿಗೆ ಸನ್ಮಾನ ಮಾಡಬೇಕಿದೆ. ನಮ್ಮಲ್ಲಿ ಎಷ್ಟೋ ಜನಕ್ಕೆ ಅಧಿಕಾರ ಸಿಕ್ಕಿಲ್ಲ. ನನ್ನಂತೆ, ಸಚಿವರುಗಳಂತೆ, ಸಿದ್ದರಾಮಯ್ಯನವರಂತೆ ಎಲ್ಲರು ಅದೃಷ್ಟಶಾಲಿಗಳಾಗಲು ಸಾಧ್ಯವಾಗಿಲ್ಲ. ಅನೇಕ ಕಾರ್ಯಕರ್ತರಿಗೆ ಸಣ್ಣ ಅಧಿಕಾರವನ್ನು ಕೊಡಲು ಆಗಿಲ್ಲ. ಈ ಪಕ್ಷ ಉಳಿದುಕೊಂಡಿರುವುದು ಈ ಕಾರ್ಯಕರ್ತರಿಂದ. ಪಕ್ಷಕ್ಕೆ ಭೂಮಿ ದಾನ ಮಾಡಿರುವವರು, ಹಣ ಕೊಟ್ಟಿರುವವರಿಗೆ ಗೌರವ ಸಲ್ಲಿಸಲು ತೀರ್ಮಾನಿಸಿದ್ದೇವೆ. ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯ್ತಿ ಹಾಗೂ ವಾರ್ಡ್ ಗಳಲ್ಲಿ ಯುವಕರ ಸಂಘಗಳನ್ನು ಸ್ಥಾಪಿಸಿ ರಾಜ್ಯಾದ್ಯಂತ ಒಟ್ಟು 10 ಸಾವಿರ ಭಾರತ ಜೋಡೋ ಯುವ ಶಕ್ತಿ ಸಂಘ ಸ್ಥಾಪಿಸಲು ಸರ್ಕಾರ ಮುಂದಾಗಿದೆ.  ಇವುಗಳಿಗೆ ಒಂದು ಸಾವಿರ ಕೋಟಿಅನುದಾನ ಮೀಸಲಿಡಲಾಗುವುದು. 10 ರೂ. ಗೌರವ ಧನ ನೀಡಿ ಸದಸ್ಯತ್ವ ಪಡೆಯಬಹುದು. 16-40 ವಯೋಮಾನದವರು ಸದಸ್ಯರಾಗಬಹುದು. ಈ ತಿಂಗಳು ನೋಂದಣಿ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದರು.

 

Related Posts

Leave a Reply

Your email address will not be published. Required fields are marked *