ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಹಲವರು ಮಣ್ಣಿನಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇಡುಕ್ಕಿಯ ವಾಗಮನ್ ಪ್ರದೇಶದಲ್ಲಿ ಭೂಕುಸಿತವುಂಟಾಗಿ ಮನೆ ಮೇಲೆ ಬಿದ್ದು ವೈಕಂ ಪ್ರಭಾಕರನ್ ನಾಯರ್ ಮೃತಪಟ್ಟಿದ್ದಾರೆ. ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಸಣ್ಣ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವು ಅಣೆಕಟ್ಟುಗಳ ಗೇಟ್ ತೆರೆಯಲು ಅಧಿಕಾರಿಗಳು ಆದೇಶಿಸಿದ್ದಾರೆ. ಇಡುಕ್ಕಿಯ ಅಡೂರ್ಮಲಾ ಪ್ರದೇಶದಲ್ಲಿ ಭೂಕುಸಿತಕ್ಕೆ ಒಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕೊಚ್ಚಿ–ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯ ಅಡಿಮಾಲಿ ಸಮೀಪ ಮಚ್ಚಿಪ್ಲಾವು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಇಡುಕ್ಕಿಯ ಮತ್ತೊಂದು ಭಾಗದಲ್ಲಿ ಮನೆ ಮೇಲೆ ಭೂಕುಸಿತವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಪೂಂಜಾರ್ನ ಪಯ್ಯನಿತ್ತೊಟ್ಟಂ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೋಹ್ನಿಯವರ ಪುತ್ರ ಜೋಸೆಫ್ ಎಂಬವರು ಮೃತಪಟ್ಟಿದ್ದಾರೆ. ತಾಯಿ ಮಣ್ಣಿನಡಿ ಸಿಲುಕಿರುವ ಶಂಕೆ ಇದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ವಾಗಮನ್ ಪ್ರದೇಶದಲ್ಲಿ ಮನೆ ಮೇಲೆ ಭೂಕುಸಿತವಾಗಿ ಒಬ್ಬರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಕೈಗೊಂಡಿದ್ದಾರೆ. ರಸ್ತೆ ಮೇಲೆ ಮಣ್ಣು ಹಾಗೂ ಬಂಡೆಗಳು ಬಿದ್ದು, ವಾಹನ ಸಂಚಾರ ಬಂದ್ ಆಗಿದೆ.
ಕೊಟ್ಟಾಯಂ ಜಿಲ್ಲೆಯ ಎರಟ್ಟುಪೇಟ, ಕಂಜಿರಪ್ಪಳ್ಳಿ, ಕೂಟ್ಟಿಕ್ಕಲ್ ಹಾಗೂ ಎರುಮೇಲಿ ಪ್ರದೇಶಗಳಲ್ಲಿ ಮಳೆಯಿಂದ ಪ್ರವಾಹ ಉಂಟಾಗಿದೆ. ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ.


