ಪತ್ನಿಯ ಕೊಲೆ ಮಾಡಿದ ಬಳಿಕ ಶವವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟು ಆರೋಪಿಯು ಪರಾರಿಯಾಗಿರುವ ಘಟನೆ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ನಡೆದಿದೆ. ದುರ್ವಾಸನೆ ಬರುತ್ತಿದ್ದ ಕಾರಣ ಮನೆ ಬಾಗಿಲು ತೆರೆದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ರೀಮಾ ಕುಮಾರಿ (20) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿಯಾಗಿರುವ ಪತಿ ಧೀರಜ್ ಕುಮಾರ್ ತಲೆಮರೆಸಿಕೊಂಡಿದ್ದಾನೆ. ಇಬ್ಬರೂ ಬಿಹಾರ ರಾಜ್ಯದವರಾಗಿದ್ದು, ಒಂದು ವರ್ಷದ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದರು. ಗೇರುಪಾಳ್ಯದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ ಸಮೀಪದ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಪತಿ-ಪತ್ನಿಯ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ಜಗಳವೇ ಹತ್ಯೆಗೆ ಕಾರಣವಾಗಿರಬಹುದೆಂದು ಎಂದು ಶಂಕಿಸಲಾಗಿದೆ. ಘಟನೆ ನಡೆದು ಹಲವು ದಿನಗಳವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಮೃತ ಮಹಿಲೆಯ ಸ್ನೇಹಿತೆಯೊಬ್ಬರು ಮನೆಗೆ ಭೇಟಿ ನೀಡಿದಾಗ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಅವರು ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಮನೆ ಬಾಗಿಲು ತೆರೆಯಿಸಿ ಪರಿಶೀಲನೆ ನಡೆಸಿದಾಗ ಟಾಯ್ಲೆಟ್ ಸಮೀಪ ಬೆಡ್ಶೀಟ್ನಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಂಬಳಗೋಡು ಪೊಲೀಸರು, ಪರಾರಿಯಾಗಿರುವ ಆರೋಪಿ ಧೀರಜ್ ಕುಮಾರ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.


