Menu

ದಾವಣಗೆರೆ ದುರ್ಗಾಂಬಿಕಾ ದೇಗುಲದ ಚಿನ್ನ ಕದ್ದ ಅರ್ಚಕ

ದಾವಣಗೆರೆ ನಗರದ ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ದೇವಿಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೇವಸ್ಥಾನದ ಪೂಜಾರಿ ಕದ್ದು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ದೇವಸ್ಥಾನದ ಅರ್ಚಕರಲ್ಲಿ ಒಬ್ಬನಾದ ಆಕಾಶ್ ದೇವಿಯ ಮೈಮೇಲಿದ್ದ ಹಾಗೂ ಭಕ್ತರು ನೀಡಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಕರಗಿಸಿ ಚಿನ್ನದ ಗಟ್ಟಿ ಮಾಡಿ ಮಾರಾಟ ಮಾಡಿದ್ದಾನೆ ಎಂಬ ಆರೋಪವಿದೆ. ವಿಷಯ ತಿಳಿದ ತಕ್ಷಣ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಯಿತು. ಪೂಜಾರಿ ಆಕಾಶ್ ಹಾಗೂ ಆತನಿಂದ ಅಕ್ರಮವಾಗಿ ಚಿನ್ನಾಭರಣಗಳನ್ನು ಖರೀದಿಸಿದ್ದ ವ್ಯಾಪಾರಿಯನ್ನು ಆಡಳಿತ ಮಂಡಳಿಯು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡಿತು.

ಸಭೆಯಲ್ಲಿ ಮಾತನಾಡಿದ ಎಸ್.ಎಸ್. ಮಲ್ಲಿಕಾರ್ಜುನ್, ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ ಪ್ರತಿಯೊಂದು ಚಿನ್ನಾಭರಣದ ಲೆಕ್ಕ ನಮ್ಮಲ್ಲಿದೆ. ಎಷ್ಟು ಪ್ರಮಾಣದ ಚಿನ್ನಾಭರಣ ಇತ್ತು ಮತ್ತು ಎಷ್ಟು ನಾಪತ್ತೆಯಾಗಿದೆ ಎಂಬ ಸಂಪೂರ್ಣ ವಿವರವಿದೆ. ಪ್ರತಿಯೊಂದು ಗ್ರಾಮ್ ಚಿನ್ನವೂ ವಾಪಸ್ ಬರಲೇಬೇಕು ಎಂದು ಎಚ್ಚರಿಕೆ ನೀಡಿದರು. ಈವರೆಗೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿಲ್ಲ.

ತಮಿಳುನಾಡಿನಲ್ಲಿ ಹುಂಡಿ ಹಣ ದೋಚಿದ ದೇಗುಲ ಅಧಿಕಾರಿಗಳ ಅಮಾನತು

ದೇಗುಲದ ಹುಂಡಿ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿರುವ ತಮಿಳುನಾಡು ಸಿಎಂ ವಿಜಯ್ ಸರ್ಕಾರ, ಆ ರಾಜ್ಯದ ಪ್ರಸಿದ್ಧ ದೇವಾಲಯದ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಕೊಯಮತ್ತೂರಿನ ಅರುಳ್ಮಿಗು ಕೋಣಿಯಮ್ಮನ್ ದೇವಾಲಯದ ಹುಂಡಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ದೇವಾಲಯದಲ್ಲಿ 31 ಸಾವಿರ ರೂ. ದುರ್ಬಳಕೆ ಮಾಡಿಕೊಂಡ ಆರೋಪದಡಿ ನಾಲ್ವರು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಜುಲೈ 15ರಂದು ದೇವಾಲಯದಲ್ಲಿ ನಿಗದಿತ ಹುಂಡಿ ಎಣಿಕೆ ವೇಳೆ ಕಾಣಿಕೆ ಹಣವನ್ನು ದುರ್ಬಳಕೆ ಮಾಡಿರುವ ಬಗ್ಗೆ ಪ್ರಾದೇಶಿಕ ಜಂಟಿ ಆಯುಕ್ತ ರಮೇಶ್ ಕುಮಾರ್ ನಡೆಸಿದ ತನಿಖೆಯ ಬಳಿಕ ಈ ಶಿಸ್ತು ಕ್ರಮ ಜಾರಿಗೊಂಡಿದೆ. ಅಮಾನತು ಕ್ರಮಕ್ಕೂ ಒಂದು ದಿನ ಮೊದಲು ಉಕ್ಕಡಂ ಪೊಲೀಸರು ದೇವಾಲಯದ ನಾಲ್ವರು ಸಿಬ್ಬಂದಿಯನ್ನು ಹುಂಡಿ ಹಣ ಕಳ್ಳತನ ಪ್ರಕರಣದಲ್ಲಿ ಬಂಧಿಸಿದ್ದರು.

Related Posts

Leave a Reply

Your email address will not be published. Required fields are marked *