Menu

ಬೆಂಗಳೂರು ರೋಬಾಟಿಕ್ಸ್ ಅಂಡ್ ಎಐ ಇನ್ನೋವೇಷನ್ ಜೋನ್ ಆರಂಭಿಸಲು ತೀರ್ಮಾನ: ಸಿಎಂ ಡಿಕೆ ಶಿವಕುಮಾರ್‌

ನಾವು ಬೆಂಗಳೂರು ರೋಬೋಟಿಕ್ಸ್ ಮತ್ತು ಇನ್ನೋವೇಶನ್ ಝೋನ್ ಪ್ರಾರಂಭಿಸುತ್ತಿದ್ದೇವೆ, ಅಲ್ಲಿ ಸುಧಾರಿತ ಸಂಶೋಧನೆ, ಉತ್ಪನ್ನ ಅಭಿವೃದ್ಧಿ ಮತ್ತು ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿ ಹೊಂದಬಹುದು. ಜವಾಬ್ದಾರಿಯುತ ಮೂಲಸೌಕರ್ಯವಿಲ್ಲದೆ ಈ ಯಾವುದೇ ಡಿಜಿಟಲ್ ಬೆಳವಣಿಗೆಯು ಸುಸ್ಥಿರವಾಗಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಭೂಮಿ, ವಿದ್ಯುತ್, ನೀರು, ಸಂಪರ್ಕ ಮತ್ತು ನವೀಕರಿಸಬಹುದಾದ ಇಂಧನದ ಮೇಲೆ ಗಮನ ಹರಿಸುವ ‘ಸುಸ್ಥಿರ ಡೇಟಾ ಸೆಂಟರ್ ನೀತಿ 2026-31’  ಪರಿಚಯಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಬೆಂಗಳೂರು ಟೆಕ್ ಸಮಿಟ್ ಎಐ ಹಾಗೂ ಬಿಯಾಂಡ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಐಟಿ ಕಂಪನಿಗಳ 250ಕ್ಕೂ ಹೆಚ್ಚು ಸಿಇಒಗಳು ಭಾಗವಹಿಸಿದ್ದರು.

ನಾನು ಇಂಧನ ಸಚಿವನಾಗಿದ್ದಾಗ, ಒಂದೇ ಒಂದು ಎಕರೆ ಭೂಮಿ ವಶಪಡಿಸಿಕೊಳ್ಳದೆ, 13,000 ಎಕರೆಗಳಲ್ಲಿ ಹರಡಿರುವ 2,400 ಮೆಗಾವ್ಯಾಟ್ ಸಾಮರ್ಥ್ಯದ ಅಂದಿನ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಅನ್ನು  ನಿರ್ಮಿಸಿದೆವು. ರೈತರು ಯೋಜನೆಯ  ಪಾಲುದಾರರಾದರು. ಆ ಯಶಸ್ಸು ರೈತರಿಗೆ ಮತ್ತು ಒಟ್ಟಾಗಿ ಕೆಲಸ ಮಾಡಿದ ನಿಷ್ಠಾವಂತ ತಂಡಕ್ಕೆ ಸಲ್ಲುತ್ತದೆ ಎಂದರು.

ನಮ್ಮ ಐಟಿ ನೀತಿಯು ಡೀಪ್‌ಟೆಕ್ , ಡಿಜಿಟಲ್ ಮೂಲಸೌಕರ್ಯ, ಬಲವಾದ ಸಂಶೋಧನೆ ಮತ್ತು ಉದ್ಯಮ ಹಾಗೂ ಶೈಕ್ಷಣಿಕ ರಂಗದ ನಡುವಿನ ಸಂಬಂಧ ಗಟ್ಟಿಗೊಳಿಸುವತ್ತ ನಿರ್ಮಿತವಾಗಿದೆ. ಕರ್ನಾಟಕವು ಭಾರತದ ಪ್ರಮುಖ ಬಾಹ್ಯಾಕಾಶ ಕೇಂದ್ರವಾಗಬೇಕೆಂದು ನಾವು ಬಯಸುತ್ತೇವೆ. ನೆಹರೂ ಕಾಲದಲ್ಲಿ ಎಚ್‌ಎಎಲ್‌ , ಇಸ್ರೋ , ಐಟಿಐ , ಬಿಇಎಂಎಲ್‌ , ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂ ಬೆಂಗಳೂರು ಸ್ಥಾಪನೆಯಾಗಿದೆ. ನ್ಯಾಷನಲ್ ಲಾ ಸ್ಕೂಲ್‌ ಸಂಸ್ಥೆ ಸ್ಥಾಪನೆಯಾಗಿದೆ.  ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು ಬೆಳೆಯುತ್ತಿದ್ದಂತೆ ಕರ್ನಾಟಕವು ಕೇಂದ್ರದಲ್ಲಿರಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು.

ನಮ್ಮ ಸ್ಟಾರ್ಟ್‌ಅಪ್  ನೀತಿ ಉದ್ಯಮ ಸಂಸ್ಥಾಪಕರಿಗೆ ನಿಜವಾದ ಬೆಂಬಲ ನೀಡುವುದಾಗಿದೆ.  ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಸಂಪನ್ಮೂಲಗಳ ಲಭ್ಯತೆಯನ್ನು ಒದಗಿಸುವುದಾಗಿದೆ. ಕ್ವಾಂಟಮ್ ತಂತ್ರಜ್ಞಾನಗಳು ಉದ್ಯಮಗಳನ್ನು ರೂಪಾಂತರಿಸಲಿವೆ ಎಂದು ನಮಗೆ ತಿಳಿದಿರುವುದರಿಂದ ನಾವು ಕರ್ನಾಟಕದ ಕ್ವಾಂಟಮ್ ರೋಡ್‌ಮ್ಯಾಪ್ ಪ್ರಾರಂಭಿಸಿದ್ದೇವೆ. ನಮ್ಮ ಗುರಿ ಸರಳವಾಗಿದೆ, ಆಲೋಚನೆಗಳನ್ನು ಪ್ರಯೋಗಾಲಯದಿಂದ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದು ಮತ್ತು ಅದನ್ನು ವೇಗವಾಗಿ ಮಾಡುವುದು ಎಂದರು.

ಮುಂದಿನ ದೊಡ್ಡ ಜಿಗಿತವು ಕೃತಕ ಬುದ್ಧಿಮತ್ತೆ , ರೋಬೋಟಿಕ್ಸ್ ಮತ್ತು ಸುಸ್ಥಿರ ಮೂಲಸೌಕರ್ಯಗಳಲ್ಲಿ ಇರಲಿದೆ.  ನಾವು ‘ಎಐ ವಿಶ್ವವಿದ್ಯಾಲಯ’ವನ್ನು  ನಿರ್ಮಿಸುತ್ತಿದ್ದೇವೆ. ಸರ್ಕಾರವೊಂದೇ ಇದನ್ನು ನಿರ್ಮಿಸಬೇಕೆಂದು  ಬಯಸುವುದಿಲ್ಲ. ನಾವು ಉದ್ಯಮದೊಂದಿಗೆ ಪಾಲುದಾರರಾಗಲು ಬಯಸುತ್ತೇವೆ. ನೀವು ನೇತೃತ್ವ ವಹಿಸಿ, ಸರ್ಕಾರ ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತದೆ. ಈ ವಿಶ್ವವಿದ್ಯಾಲಯವು ಸಂಶೋಧನಾ ಸಂಸ್ಥೆಯಾಗಿರುವುದಿಲ್ಲ.  ಕಲಿಕೆ, ಆವಿಷ್ಕಾರ, ಸಹಯೋಗ ಮತ್ತು ಸಾರ್ವಜನಿಕ ಡಿಜಿಟಲ್ ಪ್ರವೇಶದ ಕೇಂದ್ರವಾಗಿರುತ್ತದೆ. ಪ್ರತಿ ಗ್ರಾಮೀಣ ವಿದ್ಯಾರ್ಥಿಯೂ 6 ನೇ ತರಗತಿಯಿಂದಲೇ ಎಐ ಕಲಿಯಲು ಪ್ರಾರಂಭಿಸಬೇಕೆಂದು  ಬಯಸುತ್ತೇವೆ, ಏಕೆಂದರೆ ಭವಿಷ್ಯವು ಮುಂದಿನ ಪೀಳಿಗೆಗೆ ಸೇರಿದ್ದಾಗಿದೆ ಎಂದು ಹೇಳಿದರು.

ಉದ್ಯಮಗಳಿಗೆ ಕಚೇರಿ ಜಾಗ ದೇಶದ ಬೇರೆ ನಗರಗಳಿಗಿಂತ ಬೆಂಗಳೂರಿನಲ್ಲಿ ಕಡಿಮೆ ವೆಚ್ಚದಲ್ಲಿ ಸಿಗುತ್ತಿದೆ. ಬೇರೆ ನಗರಗಳಲ್ಲಿ 3.5 ಡಾಲರ್ ವೆಚ್ಚವಾದರೆ ಬೆಂಗಳೂರಿನಲ್ಲಿ 1 ಡಾಲರ್ ವೆಚ್ಚವಾಗುತ್ತಿದೆ. ಬಿಯಾಂಡ್ ಬೆಂಗಳೂರು ನೀತಿ ಮೂಲಕ ರಾಜ್ಯದ ಇತರೆ ನಗರಗಳಿಗೆ ಉದ್ಯಮಗಳನ್ನು ವಿಸ್ತರಿಸುತ್ತಿದ್ದು, ಇದರಿಂದ ಉದ್ಯಮಗಳಿಗೆಅರ್ಧ ಡಾಲರ್ ಗೆ ಕಚೇರಿ ಜಾಗ ಸಿಗುವಂತಾಗಲಿದೆ ಎಂದು ಸಿಎಂ ಭರವಸೆ ನೀಡಿದರು.

ರಾಜ್ಯದ ಐಟಿ ರಫ್ಟು 5.50 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆ ಇದೆ.  ನಾವು 2024-25 ರಲ್ಲಿ 4.36 ಲಕ್ಷ ಕೋಟಿ ರೂ. ದಾಟಿದ್ದೇವೆ.  ನಮ್ಮ ಜಾಗತಿಕ ಸಾಮರ್ಥ್ಯ ಕೇಂದ್ರಗಳು  ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇವು  ‘ಬ್ಯಾಕ್ ಆಫೀಸ್’ಗಳಾಗಿ ಉಳಿದಿಲ್ಲ. ಆಳವಾದ ಆವಿಷ್ಕಾರ, ಉತ್ಪನ್ನ ಅಭಿವೃದ್ಧಿ ಮತ್ತು ಹೆಚ್ಚಿನ ಮೌಲ್ಯದ, ಭವಿಷ್ಯದ-ಕೇಂದ್ರೀಕೃತ ಕೆಲಸಗಳ ಕೇಂದ್ರಗಳಾಗಿವೆ. ಬೆಂಗಳೂರು ಭಾರತದ ಆಫೀಸ್ ಮಾರುಕಟ್ಟೆ ಬಳಕೆಯಲ್ಲಿ  ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ನಾವು ಬೆಂಗಳೂರನ್ನು ಮೀರಿ ಬೆಳೆಯೋಣ.  ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕರ್ನಾಟಕದ ಮೂಲೆ ಮೂಲೆಗೂ ಬೆಳವಣಿಗೆ ಕೊಂಡೊಯ್ಯೋಣ. ಮುಂದಿನ 100 ದಿನಗಳಲ್ಲಿ, ಅತ್ಯಂತ ಕೈಗೆಟುಕುವ ವೆಚ್ಚದಲ್ಲಿ ವಿಶ್ವದರ್ಜೆಯ ಕಚೇರಿ ಮೂಲಸೌಕರ್ಯವನ್ನು ಒದಗಿಸುವ ಮೂಲಕ ಕೈಗಾರಿಕೆಗಳು ಬೆಂಗಳೂರಿನ ಆಚೆಗೆ ಸ್ಥಾಪನೆಯಾಗಲು ಪ್ರೋತ್ಸಾಹಿಸುವ ನೀತಿ  ಪರಿಚಯಿಸುತ್ತೇವೆ. ಇದಕ್ಕಾಗಿ ಬೇರೆ ನಗರಗಳಲ್ಲಿ ಡಬಲ್ ಎಫ್ಎಆರ್ ಮೇಲೆ ಗಮನಹರಿಸುತ್ತಿದ್ದೇವೆ. ಪ್ರತಿಯೊಬ್ಬರಿಗೂ ಅವಕಾಶಗಳು ಸಿಗುವಂತೆ  ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದರು.

ನಾವು ನಿಮಗೆ ವಿಶ್ವ ದರ್ಜೆಯ ಪ್ರತಿಭೆ, ಅತ್ಯಾಧುನಿಕ ಸಂಶೋಧನೆ ಮತ್ತು ಆಲಿಸುವ ಹಾಗೂ ಸ್ಪಂದಿಸುವ ಆಡಳಿತ ನೀಡುತ್ತೇವೆ. ನಾವು ಅಲ್ಪಾವಧಿಯ ಹೂಡಿಕೆಗಳನ್ನು ಹುಡುಕುತ್ತಿಲ್ಲ.  ದೀರ್ಘಕಾಲೀನ ಪಾಲುದಾರಿಕೆಯನ್ನು ಹುಡುಕುತ್ತಿದ್ದೇವೆ. ನಾವು ನಿಮ್ಮೊಂದಿಗೆ ಬೆಳೆಯಲು ಬಯಸುತ್ತೇವೆ. ಬೆಂಗಳೂರು ಟೆಕ್ ಸಮಿಟ್ ಉದ್ದೇಶವೇ ಇದು. ಈ ವರ್ಷದ ಬೆಂಗಳೂರು ಟೆಕ್ ಸಮಿಟ್ ನವೆಂಬರ್ 17 ರಿಂದ 19 ರವರೆಗೆ ‘ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್’ನಲ್ಲಿ ನಡೆಯಲಿದೆ.  ಬೆಂಗಳೂರು ಟೆಕ್ ಸಮಿಟ್ ಕೇವಲ ಒಂದು ವೇದಿಕೆಯಲ್ಲ. ಇದು ನೀತಿ, ಪಾಲುದಾರಿಕೆ ಮತ್ತು ಫಲಿತಾಂಶಗಳ ವೇದಿಕೆಯಾಗಿದೆ. ಇದೊಂದು ಚಳುವಳಿ ಎಂದು ಬಣ್ಣಿಸಿದರು.

ಗ್ರಾಮೀಣ ಭಾಗದಲ್ಲಿ ಅಪಾರ ಪ್ರತಿಭೆಗಳಿವೆ. ಈ ಪ್ರತಿಭೆಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಿಎಸ್‌ಆರ್ (CSR) ನಿಧಿಯಲ್ಲಿ 2-3 ಗ್ರಾಮ ಪಂಚಾಯ್ತಿಗೆ ಒಂದು ಸರ್ಕಾರಿ ಶಾಲೆ ನಿರ್ಮಿಸಲಾಗುವುದು. ನೀವು ನಿಮ್ಮ ಸಿಎಸ್ಆರ್ ನಿಧಿಯನ್ನು ಇದಕ್ಕೆ ವಿನಿಯೋಗಿಸಿ, ತರಗತಿ ಕೊಠಡಿಗಳು, ಮೂಲಸೌಕರ್ಯ, ಶಿಕ್ಷಕರ ತರಬೇತಿ ಮತ್ತು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಸಹಾಯ ಮಾಡಿ.  ಒಮ್ಮೆ ನಾವು ನಮ್ಮ ಶಾಲೆಗಳನ್ನು ಬಲಪಡಿಸಿದ ನಂತರ,ಆರೋಗ್ಯ ಸೇವೆಯನ್ನು ಬಲಪಡಿಸಲು ಮುಂದಾಗುತ್ತೇವೆ.  ಬೆಂಗಳೂರು ಹಾಗೂ ಕರ್ನಾಟಕದಲ್ಲಿ 38 ಅಂತಾರಾಷ್ಟ್ರೀಯ ಶಾಲೆಗಳಿವೆ. ನಮ್ಮ ನಗರಗಳಲ್ಲಿರುವ ಅತ್ಯುತ್ತಮ ಖಾಸಗಿ ಶಾಲೆಗಳು ಈ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಿಕ್ಷಕರನ್ನು ನಿಯೋಜಿಸಬೇಕಿದೆ.  ನಮಗೆ ನಿಮ್ಮ ಪಾಲುದಾರಿಕೆಯ ಅಗತ್ಯವಿದೆ. ಗ್ರಾಮೀಣ ಭಾಗದಿಂದ ಜನರು ನಗರಕ್ಕೆ ವಲಸೆ ಬರುತ್ತಿರುವುದೇ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ. ಹೀಗಾಗಿ ನಾವು ಈ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.

ಶಾಲೆಗಳನ್ನು ನಿರ್ಮಿಸಲು, ನಮ್ಮ ಮಕ್ಕಳಿಗೆ ಬೆಂಬಲ ನೀಡಲು ಮತ್ತು ಕರ್ನಾಟಕವನ್ನು ಬಲಪಡಿಸಲು ನಿಮ್ಮ CSR ಸಂಪನ್ಮೂಲಗಳನ್ನು ಬಳಸಿ. ನೀವು ನಿಮ್ಮ ಭವಿಷ್ಯವನ್ನು ಇಲ್ಲಿ ನಿರ್ಮಿಸಿಕೊಂಡಿದ್ದೀರಿ. ಈಗ ಮುಂದಿನ ಪೀಳಿಗೆಯ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸೋಣ ಎಂದು ಮನವಿ ಮಾಡಿದರು.

ಇತ್ತೀಚೆಗೆ ಪ್ರಧಾನಮಂತ್ರಿಯವರು,”ಪ್ರಪಂಚವು ಬೆಂಗಳೂರಿನತ್ತ ನೋಡುತ್ತಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು ಇಲ್ಲಿಗೆ ಬರುತ್ತಿವೆ ಎಂದು ತಿಳಿಸಿದರು. ಅದಕ್ಕೆ ನಾನು ದಯವಿಟ್ಟು ಮೂಲಸೌಕರ್ಯದ ವಿಷಯದಲ್ಲಿ ನಮಗೆ ಬೆಂಬಲ ನೀಡಿ, ಏಕೆಂದರೆ ಹೂಡಿಕೆಯಿಲ್ಲದೆ ಬೆಳವಣಿಗೆ ಸಾಧ್ಯವಿಲ್ಲ ಎಂದು ಮನವಿ ಮಾಡಿದೆ. ನಾವೆಲ್ಲರೂ ‘ಟೀಮ್ ಕರ್ನಾಟಕ’ವಾಗಿ ಒಟ್ಟಾಗಿ ಕೆಲಸ ಮಾಡೋಣ. ಬೆಂಗಳೂರು ಟೆಕ್ ಸಮಿಟ್‌ನ ಭಾಗವಾಗಲು ನಾನು ಪ್ರತಿಯೊಬ್ಬ ಸಿಇಒ ಅವರನ್ನು ಆಹ್ವಾನಿಸುತ್ತೇನೆ.  ಐಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ನಮ್ಮ ಮುಖ್ಯ ಕಾರ್ಯದರ್ಶಿ, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ನೇತೃತ್ವದ ಅತ್ಯುತ್ತಮ ಅಧಿಕಾರಿಗಳ ತಂಡವಿದೆ.  ನಿಮ್ಮ ಸಲಹೆಗಳಿಗೆ ನಾವು ಮುಕ್ತವಾಗಿದ್ದೇವೆ. ಕರ್ನಾಟಕದ ಮೇಲೆ ನೀವು ಇಟ್ಟಿರುವ ನಂಬಿಕೆಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಮುಖ್ಯಮಂತ್ರಿ ಹೇಳಿದರು.

Related Posts

Leave a Reply

Your email address will not be published. Required fields are marked *