Menu

ಸಂಸತ್ತಿನಲ್ಲಿ ಮುಂದುವರಿದ ನೀಟ್‌ ಕೋಲಾಹಲ: ಸಚಿವ ಪ್ರಧಾನ್‌ ರಾಜೀನಾಮೆಗೆ ಪ್ರತಿಪಕ್ಷಗಳ ಆಗ್ರಹ

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಶುಕ್ರವಾರವೂ ನೀಟ್‌ ಕೋಲಾಹಲ ಮುಂದುವರಿದಿದೆ.  ಕಲಾಪ ಆರಂಭಗೊಳ್ಳುವುದಕ್ಕೆ ಮೊದಲೇ ದ್ವಾರದ ಬಳಿ ಸಮಾವೇಶಗೊಂಡ ಪ್ರತಿಪಕ್ಷಗಳ ನಾಯಕರು ‘ಧರ್ಮೇಂದ್ರ ಪ್ರಧಾನ್ ವಜಾಗೊಳಿಸಿ’ ಎಂಬ ಬಿತ್ತಿಪತ್ರಗಳನ್ನು ಹಿಡಿದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ರಾಜೀನಾಮೆ ಪಡೆಯುವವರೆಗೂ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

ವಿದ್ಯಾರ್ಥಿಗಳ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿರುವ ಮಧ್ಯೆ ಕೇಂದ್ರ ಸರ್ಕಾರವು ಗುರುವಾರ ತಡರಾತ್ರಿ ಕೇಂದ್ರ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿನೀತ್ ಜೋಶಿ ಅವರನ್ನು ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ನರೇಶ್ ಪಾಲ್ ಗಂಗ್ವಾರ್ ಅವರನ್ನು ನೂತನ ಕಾರ್ಯದರ್ಶಿಯಾಗಿ ನೇಮಿಸಿದೆ.

ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ತ್ವರಿತ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರವು ‘ಫಾಸ್ಟ್ ಟ್ರ್ಯಾಕ್’ ನ್ಯಾಯಾಲಯ ರಚಿಸಿ ಅಧಿಸೂಚನೆ ಹೊರಡಿಸಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ವಾರ ಸಂಸತ್ತಿನಲ್ಲಿ ವಿದ್ಯಾರ್ಥಿಗಳ ಹಿತ ಕಾಯುವ ಕಠಿಣ ಕಾನೂನು ಜಾರಿಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆ ನಡುವೆ ದೆಹಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಸಂಪೂರ್ಣ ದೂರವಿರುವಂತೆ ಸೂಚಿಸಿದೆ. ಧರಣಿಯಲ್ಲಿ ಭಾಗವಹಿಸಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಮತ್ತು ಭವಿಷ್ಯದ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.

ಕಾಕ್ರೋಚ್‌ ಜನತಾಪಾರ್ಟಿಯು ‘ಒಂದು ಜಿಲ್ಲೆ, ಒಂದು ಬೇಡಿಕೆ’ ಎಂಬ ಘೋಷವಾಕ್ಯದಡಿ ನೀಟ್ ಅಕ್ರಮ ಖಂಡಿಸಿ ಶುಕ್ರವಾರ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಕೇಂದ್ರ ಸರ್ಕಾರದೊಂದಿಗೆ ಮಧ್ಯಾಹ್ನ 12.30ಕ್ಕೆ ಎರಡನೇ ಸುತ್ತಿನ ಮಾತುಕತೆಯೂ ನಡೆಯಲಿದೆ.

ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ದೇಶದ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಶಾಂತಿಯುತ ಧರಣಿ ನಡೆಸುವಂತೆ ಬೆಂಬಲಿಗರು, ನಾಗರಿಕ ಸಮಾಜ ಹಾಗೂ ವಿದ್ಯಾರ್ಥಿ ಸಂಘಟನೆಗಳಿಗೆ ಸಿಜೆಪಿ ಕರೆ ನೀಡಿದೆ.

Related Posts

Leave a Reply

Your email address will not be published. Required fields are marked *