ನೀಟ್ ಪರೀಕ್ಷೆ ಲೋಪಗಳನ್ನು ಸರಿಪಡಿಸಲು ಸರ್ಕಾರದ ಬಳಿ ದಾರಿ ಇಲ್ಲವೇ ? ಈ ವಿಚಾರದಲ್ಲಿ ಎರಡು ದಿನಗಳ ಹಿಂದೆ ಸಿಜೆಪಿ ಮುಖಂಡರು ಮತ್ತು ದೇಶದ ಇತರ ಪ್ರಮುಖ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳ ಜೊತೆ ಕೇಂದ್ರ ಸರ್ಕಾರದ ಸಂಬಂಧಿತ ಸಚಿವರು ಚರ್ಚೆಗೆ ಮುಂದಾಗದಿರುವುದು ದುರದೃಷ್ಟಕರ.
ಕಾಕ್ರೋಚ್ ಜನತಾ ಪಾರ್ಟಿ ಈಗ ಬೀದಿಗಿಳಿದಿದೆ. ನೀಟ್ ಪರೀಕ್ಷೆ ಅವಾಂತರಕ್ಕೆ ಕಾರಣರಾದ ಮಂತ್ರಿಯ ರಾಜೀನಾಮೆಗೆ ಪಟ್ದು ಹಿಡಿದಿದೆ. ಇದೇ ವೇಳೆ ದಿಲ್ಲಿ ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಬೀಸಿದಕ್ಕೆ ಸಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ದಿನೇ ದಿನೇ ಕೇಂದ್ರ ಸರ್ಕಾರದ ವಿರುದ್ದ ಸಿಜೆಪಿ ಬೀದಿ ಹೋರಾಟ ತಾರಕಕ್ಕೆ ಏರುತ್ತಿದೆ. ಸರ್ಕಾರವು ಈ ವಿಚಾರದಲ್ಲಿ ತನ್ನ ಪ್ರತಿಷ್ಠೆ ಮತ್ತು ಹಠಮಾರಿ ಧೋರಣೆಗೆ ಅಂಟಿಕೊಂಡಂತಿದೆ . ಅದೇನೆ ಆಗಲಿ ತಾನು ಜನಪರ ಹೋರಾಟಕ್ಕೆ ಕಿವಿಗೊಡಬಾರದೆಂದು ಕೇಂದ್ರ ಸರ್ಕಾರ ತೀರ್ಮಾನಿಸಿದಂತಿದೆ. ದೇಶದ ರಾಜಧಾನಿ ದಿಲ್ಲಿಯಲ್ಲಿ ಸಂಸತ್ ಉಭಯ ಸದನಗಳ ಅಧಿವೇಶನ ಆರಂಭವಾಗಿದ್ದು ಸಂಸತ್ತಿನ ಹೊರಗೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಸಂಚು ಇಲ್ಲ ಎನ್ನಲಾಗದು. ಇದುವರೆಗಿನ ತನಿಖೆಯ ಕೆಲವೊಂದು ಅಂಶಗಳನ್ನು ಗಮನಿಸಿದಾಗ, ಇದರ ಹಿಂದೆ ಅತಿ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎನ್ನುವುದು ಸ್ಪಷ್ಟ. ಸರ್ಕಾರ ಇದರ ಸಂಪೂರ್ಣ ಹೊಣೆಯನ್ನು ಸ್ವೀಕರಿಸಬೇಕಿದೆ ಇದರ ನೈತಿಕ ಹೊಣೆಯನ್ನು ಹೊರಲು ಮೋದಿ ಸರ್ಕಾರ ಈಗಲೂ ತಯಾರಿಲ್ಲ. ಮಂಗಳವಾರದ ಸಂಸತ್ ಅಧಿವೇಶನದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಇದನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಇಂತಹ ಘಟನೆ ಆಗಬಾರದಿತ್ತು ಎಂದೂ ಅವರು ಈ ವೇಳೆ ಹೇಳಿರುವುದು ಗಮನಾರ್ಹ.
ನೀಟ್ ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಸರ್ಕಾರದ ಕಡೆಯಿಂದ ಆಗಿರುವ ಲೋಪಗಳು ಈ ದೇಶದ ಸಂಸತ್ನಲ್ಲಿ ಅಲ್ಲದೆ ಇನ್ನೆಲ್ಲಿ ಚರ್ಚೆ ಆಗಬೇಕು? ಇದರ ಹಿಂದಿರುವ ಕಪ್ಪು ತೋಳಗಳನ್ನು ಪತ್ತೆ ಹಚ್ಚಬೇಕಾದರೆ ಪ್ರಕರಣದ ಹಿಂದೆ ಅಡಗಿರುವ ಎಲ್ಲ ಮುಖಗಳು ಮತ್ತು ಇದುವರೆಗೆ ನಡೆದ ಘಟನೆಗಳ ಚರ್ಚೆ ಆಗುವುದು ಅನಿವಾರ್ಯ. ದೇಶದ ಭಾವಿ ವೈದ್ಯರಾಗುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಸರಿಯಲ್ಲ . ನೀಟ್ ಪರೀಕ್ಷೆ ಲೋಪಗಳನ್ನು ಸರಿಪಡಿಸಲು ಸರ್ಕಾರದ ಬಳಿ ದಾರಿ ಇಲ್ಲವೇ ? ಈ ವಿಚಾರದಲ್ಲಿ ಎರಡು ದಿನಗಳ ಹಿಂದೆ ಸಿಜೆಪಿ ಮುಖಂಡರು ಮತ್ತು ದೇಶದ ಇತರೆ ಪ್ರಮುಖ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳ ಜೊತೆ ಕೇಂದ್ರ ಸರ್ಕಾರದ ಸಂಬಂಧಿತ ಸಚಿವರು ಚರ್ಚೆಗೆ ಮುಂದಾಗದಿರುವುದು ದುರದೃಷ್ಟಕರ.
ಪ್ರತಿಭಟನೆಗೆ ಇಳಿದ ಮತ್ತು ಬೀದಿಯಲ್ಲಿ ಧರಣಿ ನಿರತ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಲು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸರ್ಕಾರಕ್ಕೆ ಮನವಿ ಮಾಡಿರುವುದು ಗಮನಾರ್ಹ. ಆದರೆ ಹಜಾರೆ ಅವರ ಮನವಿಗೂ ಮೋದಿ ಸರ್ಕಾರ ಮಣಿಯದಿರುವುದು ಖಂಡನೀಯ. ಇದಲ್ಲದೆ ಪ್ರತಿಭಟನಾಕಾರರ ಮೇಲೆ ಇಲ್ಲಸಲ್ಲದ ಕ್ರಿಮಿನಲ್ ಖಟ್ಲೆ ದಾಖಲಿಸಲು ಸರ್ಕಾರ ಹುನ್ನಾರ ನಡೆಸಿದೆ. ಇದು ಅನಗತ್ಯ. ಒಟ್ಟಿನಲ್ಲಿ ಮೋದಿ ಸರ್ಕಾರ ಯುವಜನತೆಯ ಕಷ್ಟ -ಕಾರ್ಪಣ್ಯಗಳಿಗೆ ಮತ್ತು ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸದೆ ಏಕಪಕ್ಷೀಯವಾಗಿ ವರ್ತಿಸಿದರೆ ಇದಕ್ಕೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾದೀತು.


