Menu

ಸೋನಂ ವಾಂಗ್ಚುಕ್‌ ಉಳಿಸಲು ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ನಿರ್ದೇಶನ

ನೀಟ್‌-ಯುಜಿ ಪರೀಕ್ಷೆ ಅಕ್ರಮಗಳ ತನಿಖೆಗೆ ಆಗ್ರಹಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ೧೯ ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ  ಸೋನಂ ವಾಂಗ್ಚುಕ್‌ ಅವರ ಆರೋಗ್ಯವನ್ನು ಕಾಪಾಡಿ ಉಳಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನೀಟ್‌- ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ, ಫಲಿತಾಂಶ ರದ್ದು, ವಿದ್ಯಾರ್ಥಿಗಳ ಆತ್ಮಹತ್ಯೆ ಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಾಂಗ್‌ಚುಕ್‌ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿ 19 ದಿನಗಳನ್ನು ಪೂರೈಸಿದ್ದಾರೆ. ಅವರ ಜೀವವನ್ನು ಉಳಿಸಲು ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಯಾವುದೇ ನಾಗರಿಕರ ಜೀವವು ಅಮೂಲ್ಯ. ಜೀವ ಉಳಿಸಲು ಅಧಿಕಾರಿಗಳು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

59 ವರ್ಷದ ವಾಂಗ್ಚುಕ್ ಉಪವಾಸ ಮುರಿಯದಿದ್ದರೆ ಮುಂದಿನ 48 ಗಂಟೆಗಳ ಒಳಗೆ ಮೃತಪಟುವ ಸಾಧ್ಯತೆ ಇದೆ ಎಂದು ಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆಯಾಗಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠ ವಿಚಾರಣೆ ನಡೆಸಿದೆ.

ವಾಂಗ್‌ಚುಕ್ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿರುವ ವೈದ್ಯರ ಸಲಹೆ ಮೇರೆಗೆ ಅಗತ್ಯವಿರುವ ವೈದ್ಯಕೀಯ ನೆರವು ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.. ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಾಂಗ್ಚುಕ್ ಅವರ ಆರೋಗ್ಯವನ್ನು ಈಗಾಗಲೇ ಸರ್ಕಾರಿ ವೈದ್ಯರು ಮತ್ತು ವೈದ್ಯಕೀಯ ತಜ್ಞರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅವರ ಸ್ಥಿತಿಯ ಆಧಾರದ ಮೇಲೆ ವೈದ್ಯರು ಸೂಚಿಸಿದಂತೆ ಅಗತ್ಯವಿರುವ ಯಾವುದೇ ಸಹಾಯವನ್ನೂ ಸರ್ಕಾರ ಮಾಡಲಿದೆ‌ ಎಂದು ಭರವಸೆ ನೀಡಿದರು.

ವಾಂಗ್ಚುಕ್‌ ಅವರ ತೂಕ 56.65 ಕೆಜಿಗೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ 500 ಗ್ರಾಂಗಳಷ್ಟು ತೂಕ ಇಳಿಕೆಯಾಗಿದೆ. ಉಪವಾಸ ಸತ್ಯಾಗ್ರಹ ಆರಂಭಿಸಿದಾಗಿನಿಂದ 9 ಕೆಜಿ ತೂಕ ಇಳಿದಿದೆ ಎಂದು ವೈದ್ಯ ಡಾ. ಸತೀಶ್ ಲಂಬಾ ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *