ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಪೂರ್ಣ ಪ್ರಮಾಣದ ಸರ್ಕಾರ ನಡೆಸಲಾಗದ ನೀವು ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದ್ದೀರಿ. ಡಿಕೆ ಶಿವಕುಮಾರ್ ಅವರೇ, ನಿಮ್ಮ ರಾಜಕೀಯ ಗೊಂದಲ ಹಾಗೂ ಪುಕ್ಕಲುತನಕ್ಕೆ ರಾಜ್ಯದ ಅನ್ನದಾತರನ್ನ ಬಲಿಕೊಡುವುದನ್ನು ನಿಲ್ಲಿಸಿ. ನಿಮ್ಮಂತಹ ಪುಕ್ಕಲು ಮುಖ್ಯಮಂತ್ರಿ ಇದ್ದರೆಷ್ಟು, ಬಿಟ್ಟರೆಷ್ಟು , ಮುಖ್ಯಮಂತ್ರಿಯಾಗಿ ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಮಾಡಲು ನಿಮಗೇಕೆ ಇಷ್ಟೊಂದು ಭಯ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಟೀಕಿಸಿದ್ದಾರೆ.
ಅತಿವೃಷ್ಟಿ-ಅನಾವೃಷ್ಟಿಯಿಂದ ಈರುಳ್ಳಿ ಬೆಳೆ ನಾಶವಾಗುತ್ತಿದೆ. ಬೆಲೆ ಕುಸಿತ ಹಾಗೂ ಕಮಿಷನ್ ಏಜೆಂಟರ ಹಾವಳಿಗೆ ಸಿಲುಕಿ ಟೊಮೇಟೊ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ. 14 ಕೆಜಿಯ ಟೊಮೇಟೊ ಬಾಕ್ಸ್ 150 ರೂಪಾಯಿಗೆ ಇಳಿದು ರೈತರು ಬೀದಿಗೆ ಬಿದ್ದಿದ್ದಾರೆ. ರೈತರ ಕಷ್ಟ ಕೇಳಲು ಈ ನಾಲಾಯಕ್ @INCKarnataka ಸರ್ಕಾರದಲ್ಲಿ ಒಬ್ಬ ಪೂರ್ಣಾವಧಿ ಕೃಷಿ ಸಚಿವರಿಲ್ಲ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಪುಕ್ಕಲು ಮತ್ತು ಅಸಮರ್ಥ ಮುಖ್ಯಮಂತ್ರಿ ಅನ್ನುವುದು ಗ್ಯಾರೆಂಟಿ!
ರಾಜ್ಯದಲ್ಲಿ ಅತಿವೃಷ್ಟಿ-ಅನಾವೃಷ್ಟಿಯಿಂದ ಈರುಳ್ಳಿ ಬೆಳೆ ನಾಶವಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಹಾಗೂ ಕಮಿಷನ್ ಏಜೆಂಟರ ಹಾವಳಿಗೆ ಸಿಲುಕಿ ಟೊಮೇಟೊ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ. 14 ಕೆಜಿಯ… pic.twitter.com/59WvDZoFTq
— R. Ashoka (@RAshokaBJP) July 9, 2026
ಮುಖ್ಯಮಂತ್ರಿ @DKShivakumar ಅವರೇ, ಸಂಪುಟ ವಿಸ್ತರಣೆಗೆ ಕೈಹಾಕಿದರೆ ನಿಮ್ಮದೇ ಪಕ್ಷದ ಶಾಸಕರ ಬಂಡಾಯ ಏಳುತ್ತಾರೆ ಎಂದು ಹೆದರಿದ್ದೀರಾ, ಸಚಿವಾಂಕ್ಷಿಗಳು ಬಂಡಾಯ ಎದ್ದರೆ ಅತ್ತು-ಸುರಿದು, ಕಾಡಿ-ಬೇಡಿ ಪಡೆದಿರುವ ಸಿಎಂ ಕುರ್ಚಿಯೇ ಅಲ್ಲಾಡಬಹುದು ಎನ್ನುವ ಭಯ ಕಾಡುತ್ತಿದೆಯೇ ಅಥವಾ ಹೈಕಮಾಂಡ್ ರಬ್ಬರ್ ಸ್ಟ್ಯಾಂಪ್ ಆಗಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ತಾಕತ್ತೇ ಇಲ್ಲದಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಪುಕ್ಕಲುತನಕ್ಕೆ ರಾಜ್ಯದ ಅನ್ನದಾತರು ಯಾಕೆ ಬಲಿಯಾಗಬೇಕು, ಚಿತ್ರದುರ್ಗ, ವಿಜಯಪುರ, ಗದಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ರೈತರು ಕಂಗಾಲಾಗಿದ್ದರೂ, ಕೃಷಿ ಇಲಾಖೆಗೆ ಒಬ್ಬ ಪೂರ್ಣಾವಧಿ ಸಚಿವರನ್ನು ನೇಮಿಸಲು ಸಾಧ್ಯವಾಗದ ನಿಮ್ಮಂತಹ ಮುಖ್ಯಮಂತ್ರಿ ಇದ್ದರೆಷ್ಟು, ಬಿಟ್ಟರೆಷ್ಟು ಡಿಕೆಶಿ ಅವರೇ, ರೈತರ ಹಿತರಕ್ಷಣೆ ಮಾಡುವುದಕ್ಕಿಂತ, ಆಂತರಿಕ ಕಲಹಗಳನ್ನು ಮರೆಮಾಚುವುದು ಮತ್ತು ಕುರ್ಚಿ ಭದ್ರಪಡಿಸಿಕೊಳ್ಳುವುದೇ ಮುಖ್ಯವಾಗಿದೆಯೇ ಎಂದು ಕಿಡಿ ಕಾರಿದ್ದಾರೆ.
ಈ ಸ್ವಾರ್ಥ ಚಿಂತನೆ, ಹೆದರಿಕೆ ಬಿಟ್ಟು ಕೃಷಿ ಸೇರಿದಂತೆ ಖಾಲಿ ಇರುವ ಪ್ರಮುಖ ಇಲಾಖೆಗಳಿಗೆ ಪೂರ್ಣಾವಧಿ ಸಚಿವರನ್ನು ನೇಮಿಸಿ ರೈತರ, ಜನಸಾಮಾನ್ಯರ ರಕ್ಷಣೆಗೆ ನಿಲ್ಲಿ. ಇಲ್ಲದಿದ್ದರೆ ರಾಜ್ಯದ ಜನತೆ ನಿಮ್ಮ ಅಸಮರ್ಥ ಆಡಳಿತಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಅಶೋಕ ಎಚ್ಚರಿಸಿದ್ದಾರೆ.
ಟೈಪ್-1 ಮಧುಮೇಹದಿಂದ (Type-1 Diabetes) ಬಳಲುತ್ತಿರುವ 18 ವರ್ಷದೊಳಗಿನ ಪುಟ್ಟ ಮಕ್ಕಳ ಜೀವ ರಕ್ಷಕ ‘ಉಚಿತ ಇನ್ಸುಲಿನ್ ಯೋಜನೆ’ಯನ್ನು ಘೋಷಿಸಿ ನಾಲ್ಕೈದು ತಿಂಗಳು ಕಳೆದರೂ ಇಂದಿಗೂ ಜಾರಿಗೆ ತರದ ಈ ನಿರ್ದಯಿ, ಜನವಿರೋಧಿ @INCKarnataka ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಮುಖ್ಯಮಂತ್ರಿ @DKShivakumar ಅವರೇ ಎಂದು ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಬಜೆಟ್‌ನಲ್ಲಿ ಜನಪ್ರಿಯತೆಗಾಗಿ ಸುಳ್ಳು ಘೋಷಣೆಗಳನ್ನು ಕೂಗಿ ಪ್ರಚಾರ ಗಿಟ್ಟಿಸಿಕೊಂಡು ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದ್ದೀರಾ, ಕುಮಾರಕೃಪಾದಲ್ಲಿ ಕೂತು ಕಮಿಷನ್ ಲೆಕ್ಕಾಚಾರ ಮಾಡುವುದರಲ್ಲಿ ಬ್ಯುಸಿಯಾಗಿರುವ ನಿಮಗೆ ಇನ್ಸುಲಿನ್‌ಗಾಗಿ ತಿಂಗಳಿಗೆ 2 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಲಾರದೆ ಕಣ್ಣೀರು ಹಾಕುತ್ತಿರುವ ಪೋಷಕರ ಆಕ್ರಂದನ ಕೇಳಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
‘ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ’ದ (KSMSCL) ಅಧಿಕಾರಿಗಳ ಘೋರ ನಿರ್ಲಕ್ಷ್ಯ ಮತ್ತು ಟೆಂಡರ್ ಪ್ರಕ್ರಿಯೆಯ ವಿಳಂಬದಿಂದಾಗಿ ಯೋಜನೆ ಹಳ್ಳ ಹಿಡಿದಿದೆ. ನಿಮಗೆ ಸಚಿವರ ಮೇಲೆ, ಅಧಿಕಾರಿಗಳ ಮೇಲೆ, ಆಡಳಿತದ ಮೇಲೆ ಹಿಡಿತ ಇಲ್ಲವೇ ಮುಖ್ಯಮಂತ್ರಿಗಳೇ ಎಂದು ಕೇಳಿದ್ದಾರೆ.
ರಾಜ್ಯದಲ್ಲಿ 7,000ಕ್ಕೂ ಹೆಚ್ಚು ಟೈಪ್-1 ಮಧುಮೇಹ ಬಾಧಿತ ಮಕ್ಕಳು ಇನ್ಸುಲಿನ್ ಸಿಗದೆ ತತ್ತರಿಸುತ್ತಿದ್ದಾರೆ. ಬಡವರು ಹಣವಿಲ್ಲದೆ ಕ್ಕಳಿಗೆ ಕಡಿಮೆ ಪ್ರಮಾಣದ ಇನ್ಸುಲಿನ್ ನೀಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆ ಮಕ್ಕಳಿಗೆ ಹೆಚ್ಚು ಕಡಿಮೆಯಾಗಿ ಪ್ರಾಣಾಪಾಯವಾದರೆ ಸರ್ಕಾರಿ ಪ್ರಾಯೋಜಿತ ಕೊಲೆ ಆಗುವುದಿಲ್ಲವೇ, ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಮಕ್ಕಳ (KIDS) ಸಂಸ್ಥೆಗಳಲ್ಲಿ ಸಾವಿರಾರು ಮಕ್ಕಳು ನೋಂದಾಯಿಸಿಕೊಂಡಿದ್ದರೂ, ಸರ್ಕಾರದಿಂದ ಇನ್ಸುಲಿನ್ ಪೂರೈಕೆಯಾಗಿಲ್ಲ. ಎನ್‌ಜಿಒಗಳ ನೆರವು ಪಡೆಯುವ ಸ್ಥಿತಿಗೆ ಸರ್ಕಾರಿ ಆಸ್ಪತ್ರೆಗಳು ಬಂದು ನಿಂತಿವೆ ಎಂದು ಟೀಕಿಸಿದ್ದಾರೆ.


