Menu

ಚುರುಕುಗೊಂಡ ಮುಂಗಾರು ಮಳೆ: ಕೆಆರ್‌ಎಸ್‌ಗೆ ದಾಖಲೆಯ ಒಳಹರಿವು

ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರಗೊಂಡ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ  ಕೃಷ್ಣರಾಜಸಾಗರ ಜಲಾಶಯಕ್ಕೆ  ಭಾರಿ ಪ್ರಮಾಣದ ಒಳಹರಿವು ದಾಖಲಾಗಿದೆ.

ಕಳೆದ ಕೆಲವು ದಿನಗಳಿಂದ ಕಾವೇರಿ ಉಗಮ ಸ್ಥಾನವಾದ ತಲಕಾವೇರಿ, ಭಾಗಮಂಡಲ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ.  ಕಾವೇರಿ ಮತ್ತು ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಾಶಯಕ್ಕೆ ಬರುವ ನೀರಿನ ಪ್ರಮಾಣದಲ್ಲಿ ದಿಢೀರ್  ಏರಿಕೆಯಾಗಿದೆ.  ಸೋಮವಾರ  1,449 ಕ್ಯೂಸೆಕ್‌ ಇದ್ದ  ಒಳಹರಿವಿನ ಪ್ರಮಾಣ 24 ಗಂಟೆಗಳ ಅವಧಿಯಲ್ಲಿ ಭಾರಿ ಏರಿಕೆಯಾಗಿ ಮಂಗಳವಾರ  4,291 ಕ್ಯೂಸೆಕ್‌ಗೆ ತಲುಪಿದೆ.

ಭೀಕರ ಬಿಸಿಲು ಮತ್ತು ಕುಡಿಯುವ ನೀರಿನ ಅತಿ ಬಳಕೆಯಿಂದಾಗಿ ಜಲಾಶಯದ ನೀರಿನ ಮಟ್ಟ ತಳ ಮುಟ್ಟಿತ್ತು. ಮುಂಗಾರು ಆರಂಭದಲ್ಲೇ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಣಗುತ್ತಿದ್ದ ಕಾವೇರಿ ಒಡಲಿಗೆ ಹೊಸ ಚೈತನ್ಯ ಬಂದಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಕೊಡಗು ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಜಲಾಶಯದ ಒಳಹರಿವಿನ ಪ್ರಮಾಣ  ಹೆಚ್ಚಾಗುವ ನಿರೀಕ್ಷೆಯಿದೆ ಎಂದು ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯದಿಂದ ತಮಿಳುನಾಡಿಗೆ ಹರಿಸುವ ನೀರನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದ್ದು,  ನದಿ ಪಾತ್ರದ ನಾಲೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಮಾತ್ರ ಕನಿಷ್ಠ ಪ್ರಮಾಣದ ಹೊರಹರಿವನ್ನು  ನಿರ್ವಹಿಸಲಾಗುತ್ತಿದೆ.  ಡ್ಯಾಂಗೆ ಒಳಹರಿವಿ ಹೆಚ್ಚಳ ಮಂಡ್ಯ, ಮೈಸೂರು ಭಾಗದ ರೈತರಲ್ಲಿ ಸಡಗರವನ್ನು ಉಂಟುಮಾಡಿದೆ. ಮಂಡ್ಯ, ಮೈಸೂರು ಹಾಗೂ ಬೆಂಗಳೂರು ನಗರಗಳ ಕುಡಿಯುವ ನೀರಿನ ಆತಂಕ ಸದ್ಯಕ್ಕೆ ದೂರವಾಗಿದೆ. ಜಲಾಶಯದ ಸುರಕ್ಷತೆ ಮತ್ತು ನೀರಿನ ಮಟ್ಟದ ಮೇಲ್ವಿಚಾರಣೆಯನ್ನು ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳು ಜಂಟಿಯಾಗಿ ನಿರಂತರವಾಗಿ ನಡೆಸುತ್ತಿದ್ದಾರೆ.

ಕೆಆರ್‌ಎಸ್ ಗರಿಷ್ಠ ಮಟ್ಟ: 124.80 ಅಡಿಗಳು
ಇಂದಿನ ನೀರಿನ ಮಟ್ಟ: 92.50 ಅಡಿಗಳು (ನಿರಂತರ ಏರಿಕೆ ಹಾದಿಯಲ್ಲಿ)
ಇಂದಿನ ಒಳಹರಿವು: 4,291 ಕ್ಯೂಸೆಕ್ (ನಿನ್ನೆ 1,449 ಕ್ಯೂಸೆಕ್ ಇತ್ತು)
ಇಂದಿನ ಹೊರಹರಿವು: 500 ಕ್ಯೂಸೆಕ್ (ಕೇವಲ ಕುಡಿಯುವ ನೀರಿಗಾಗಿ ಮಾತ್ರ)
ಪ್ರಸ್ತುತ ನೀರಿನ ಸಂಗ್ರಹ:  18.25 ಟಿಎಂಸಿ (ಒಟ್ಟು ಸಾಮರ್ಥ್ಯ 49.45 ಟಿಎಂಸಿ).

Related Posts

Leave a Reply

Your email address will not be published. Required fields are marked *