Menu

ಮಹಾರಾಷ್ಟ್ರದಲ್ಲಿ ಮಳೆ ಅವಾಂತರಕ್ಕೆ 13 ಮಂದಿ ಬಲಿ

ಮಹಾರಾಷ್ಟ್ರದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಗೆ ಮುಂಬೈ, ಥಾಣೆ ಮತ್ತು ರಾಯಘಡ ತತ್ತರಿಸಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್ ಘೋಷಣೆ ಮಾಡಿದೆ. ಭಾರೀ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಮುಂಬೈ, ಪಾಲ್ಘರ್ ಮತ್ತು ರಾಯಗಡ ಜಿಲ್ಲೆಗಳಲ್ಲಿ 13 ಮಂದಿ ಮೃತಪಟ್ಟಿದ್ದಾಗಿ ಅಲ್ಲಿನ ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್ ಮಾಹಿತಿ ನೀಡಿದ್ದಾರೆ.

ಮಳೆಯ ಅವಾಂತರದ ಕಾರಣ ಮಹಾರಾಷ್ಟ್ರ ವಿಧಾನ ಪರಿಷತ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಮುಂಬೈನ ಮಾನ್ಖುರ್ಡ್ ಪ್ರದೇಶದಲ್ಲಿ ಮಳೆಯಿಂದ ಚಾಳ್ ಕಟ್ಟಡ ಕುಸಿದು ಆರು ಮಂದಿ ಅಸು ನೀಗಿದ್ದಾರೆ.
ಮುಂಬೈನಲ್ಲಿ ಮರಗಳು ಉರುಳಿ ಬಿದ್ದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಮರವೊಂದು ಬೇರುಸಹಿತ ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬಿದ್ದು ಬಾಲಕ ಅಸು ನೀಗಿದ್ದಾನೆ.

ಮಳೆ ಮುಂದುವರಿದ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಖಾಸಗಿ ಸಂಸ್ಥೆಗಳು ಸಾಧ್ಯವಾದಲ್ಲಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿದೆ.ಮುಂಬೈ, ಥಾಣೆ ಹಾಗೂ ರಾಯಗಡ ಜಿಲ್ಲೆಗಳಲ್ಲಿ ಗಂಟೆಗೆ 80–90 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರಿ ಮಳೆ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತವಾಗುವ, ಆಕಸ್ಮಿಕ ಪ್ರವಾಹ ಹಾಗೂ ನದಿಗಳಲ್ಲಿ ಪ್ರವಾಹ ಉಂಟಾಗುವ, ರಸ್ತೆಗಳು ಮತ್ತು ಸೇತುವೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಬಿರುಗಾಳಿಯ ಪರಿಣಾಮ ಮರಗಳು ಉರುಳುವ, ಹಳೆಯ ಕಟ್ಟಡಗಳಿಗೆ ಹಾನಿಯಾಗುವ ಹಾಗೂ ಗುಡ್ಡಪ್ರದೇಶಗಳಲ್ಲಿ ಭೂಕುಸಿತ, ಮಣ್ಣಿನ ಕುಸಿತ ಮತ್ತು ಬಂಡೆಗಳು ಉರುಳುವ ಅಪಾಯ ಇದೆ ಎಂದು ಮಾಹಿತಿ ನೀಡಿದೆ.

ನಾಗರಿಕರು ಅನಗತ್ಯವಾಗಿ ಹೊರಗೆ ತೆರಳಬಾರದು, ಅಗತ್ಯ ಸಂದರ್ಭ ಹೊರತುಪಡಿಸಿ ಮನೆಯಲ್ಲೇ ಇರಬೇಕು ಹಾಗೂ ಸರ್ಕಾರದ ಅಧಿಕೃತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಮಳೆಯಿಂದಾಗಿ ಭೋರ್ ಘಾಟ್ ಪ್ರದೇಶದಲ್ಲಿ ಭೂಕುಸಿತವುಂಟಾಗಿ ಮುಂಬೈ-ಪುಣೆ ರೈಲು ಮಾರ್ಗದ ಮೂರು ಹಳಿಗಳ ಸಂಚಾರ ಸ್ಥಗಿತಗೊಂಡಿದೆ. ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ, ಹಳೆ ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿ ಹಾಗೂ ಪರ್ಯಾಯ ರಸ್ತೆಗಳ ವಾಹನ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಭೂಕುಸಿತದಿಂದ ಮಣ್ಣು, ಕಲ್ಲುಗಳು ಮತ್ತು ಮರಗಳು ಹಳಿಗಳ ಮೇಲೆ ಬಿದ್ದ ಪರಿಣಾಮ ಮುಂಬೈ ವಿಭಾಗದ ಅಪ್ ಲೈನ್, ಪುಣೆ ವಿಭಾಗದ ಡೌನ್ ಲೈನ್ ಹಾಗೂ ಮಧ್ಯದ ಲೈನ್‌ಗಳಲ್ಲೂ  ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Related Posts

Leave a Reply

Your email address will not be published. Required fields are marked *