ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಈ ಮೇಲ್ ಮೂಲಕ ಮತ್ತೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಜಿಲ್ಲಾ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಗುರುವಾರ ಜಿಲ್ಲಾ ಮುಖ್ಯ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ವ್ಯಕ್ತಿಯಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಇಮೇಲ್ ಕರೆ ಬಂದಿತ್ತು. ಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಜಿಲ್ಲಾ ಪೊಲೀಸ್ ಬಿಗಿಕ್ರಮ ಕೈಗೊಂಡಿತ್ತು. ಅದು ಹುಸಿ ಕರೆ ಎಂಬುದು ಗೊತ್ತಾಗಿತ್ತು.
ಅದಾದ ಬಳಿಕ ಜೂನ್ 27ರ ಶನಿವಾರ ಮತ್ತು 29ರ ಸೋಮವಾರ ಮುಖ್ಯ ನ್ಯಾಯಾಧೀಶರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಎರಡೂ ಕರೆಗೆ ಸಂಬಂಧಿಸಿದಂತೆ ಜಯನಗರ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ. ಕಳೆದ 6 ದಿನಗಳಿಂದ ಜಿಲ್ಲಾ ನ್ಯಾಯಾಲಯ ಸಂಕಿರ್ಣದ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಎಲ್ಲಾ ದ್ವಾರಗಳಲ್ಲಿಯೂ ತಪಾಸಣಾ ತಂಡ ಸಾರ್ವಜನಿಕರನ್ನು ಮತ್ತು ನ್ಯಾಯಾಲಯಕ್ಕೆ ಬರುವ ಎಲ್ಲರನ್ನು ಪರಿಶೀಲನೆ ನಡೆಸಿ, ಒಳಗೆ ಬಿಡಲಾಗುತ್ತಿದೆ. ತಪಾಸಣಾ ತಂಡದಿಂದ ನ್ಯಾಯಾಲಯದ ಒಳಭಾಗದಲ್ಲಿ ಹಾಗೂ ಹೊರಭಾಗದಲ್ಲಿ ಬಾಂಬ್ ನಿಷ್ಕ್ರೀಯದಳ ಮತ್ತು ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳ ನ್ಯಾಯಾಲಯಕ್ಕೆ ಈ ರೀತಿಯ ಹುಸಿಬಾಂಬ್ ಕರೆ ಬರುತ್ತಿದ್ದು, ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದೆ.
ಇತ್ತೀಚೆಗೆ ನ್ಯಾಯಾಲಯಗಳಿಗೆ ಆಗಾಗ ಬೆದರಿಕೆ ಸಂದೇಶಗಳು ಬರುತ್ತಿದ್ದು, ಸೈಬರ್ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿ ಇದರ ಹಿಂದಿನ ಆರೋಪಿಗಳನ್ನು ಬಯಲಿಗೆಳೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾದುದು ಸುರಕ್ಷತೆ ದೃಷ್ಟಿಯಿಂದ ಅತ್ಯಗತ್ಯ.
ಒಂದು ಲಕ್ಷ ಮೌಲ್ಯದ ಎಂಡಿಎಂಎ ಸಹಿತ ವ್ಯಕ್ತಿ ಅರೆಸ್ಟ್
ಶಿವಮೊಗ್ಗ ನಗರದಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಾಹೀದ್ ಖಾನ್ (40) ಎಂದು ಗುರುತಿಸಲಾಗಿದೆ. ಈತನಿಂದ 1,52,000 ಮೌಲ್ಯದ 15.21 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಹಾಗೂ ಮಾರಾಟಕ್ಕೆ ಬಳಸಿದ್ದ 40,000 ಮೌಲ್ಯದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
100 ಅಡಿ ರಸ್ತೆಯಿಂದ ಅಣ್ಣನಗರ ಮಾರ್ಗದಲ್ಲಿ ಇರುವ ತುಂಗಾ ಚಾನೆಲ್ ಏರಿಯಾ ರಸ್ತೆ ಬದಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆ ದೊಡ್ಡಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


