ಮೇಕೆದಾಟು ಬಹುಪಯೋಗಿ ಯೋಜನೆಗಿಂತ ತಮಿಳುನಾಡಿನ ಕೃಷ್ಣಗಿರಿ ಬಳಿ ರಾಸಿಮಣಲ್ ಹೆಸರಿನಲ್ಲಿ ಅಣೆಕಟ್ಟು ನಿರ್ಮಿಸಲು ಯೋಜನೆಯೊಂದು ಸದ್ದಿಲ್ಲದೆ ಮುಂದುವರಿದಿದೆ. ತಮಿಳುನಾಡಿನ ನಿವೃತ್ತ ಇಂಜನಿಯರ್ ಒಬ್ಬರು ತಯಾರಿಸಿರುವ ಈ ವರದಿಯಲ್ಲಿ ಮೇಕೆದಾಟು ಯೋಜನೆಯ ಆಶಯಗಳನ್ನು ಹಿಮ್ಮೆಟ್ಟಿಸುವ ಹುನ್ನಾರವಿದೆ.
ಮೇಕೆದಾಟು ಮತ್ತು ಕಳಸಾ ಬಂಡೂರಿ -ಇವು ರಾಜ್ಯದ ಎರಡು ಪ್ರಮುಖ ಯೋಜನೆಗಳು. ಎರಡೂ ಯೋಜನೆಗಳಿಗೆ ಪರಿಸರದ ತೊಡಕುಗಳು. ಇದೇ ಕಾರಣದಿಂದ ಕಾರ್ಯಗತವಾಗದ ಕಾಮಗಾರಿಗಳು. ದಶಕಗಳೇ ಕಳೆದರೂ ಕೇಂದ್ರದಿಂದ ಸಿಗದ ಸಾನುಕೂಲ ಸ್ಪಂದನೆ. ಕಾವೇರಿ ಕಣಿವೆಯಲ್ಲಿ ಎಂದೋ ಕೈಗೂಡಬೇಕಿದ್ದ ಮೇಕೆದಾಟು ಯೋಜನೆಗೆ ಈಗ ಹಲವು ಹತ್ತು ಅಡ್ಡಿ. ಜೊತೆಗೆ ತಮಿಳುನಾಡು ಸರ್ಕಾರದಿಂದ ಇದಕ್ಕೆ ಪರ್ಯಾಯವಾದ ಮತ್ತೊಂದು ಯೋಜನೆಯ ತಯಾರಿ.. !
ಮೇಕೆದಾಟು ಬಹುಪಯೋಗಿ ಯೋಜನೆಗಿಂತ ತಮಿಳುನಾಡಿನ ಕೃಷ್ಣಗಿರಿ ಬಳಿ ರಾಸಿಮಣಲ್ ಹೆಸರಿನಲ್ಲಿ ಅಣೆಕಟ್ಟು ನಿರ್ಮಿಸಲು ಯೋಜನೆಯೊಂದು ಸದ್ದಿಲ್ಲದೆ ಮುಂದುವರಿದಿದೆ.
ತಮಿಳುನಾಡಿನ ನಿವೃತ್ತ ಇಂಜನಿಯರ್ ಒಬ್ಬರು ತಯಾರಿಸಿರುವ ಈ ವರದಿಯಲ್ಲಿ ಮೇಕೆದಾಟು ಯೋಜನೆಯ ಆಶಯಗಳನ್ನು ಹಿಮ್ಮೆಟ್ಟಿಸುವ ಹುನ್ನಾರವಿದೆ. ಅಲ್ಲದೆ ಈ ಯೋಜನೆಯನ್ನು ವಿಜಯ್ ನೇತೃತ್ವದ ಸರ್ಕಾರ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಿ ಇದಕ್ಕೆ ಅನುಮೋದನೆ ಪಡೆಯುವ ದಿಕ್ಕಿನಲ್ಲಿದೆ. ಮೊದಲಿಂದಲೂ ಕರ್ನಾಟಕದ ಕಾವೇರಿ ಕಣಿವೆಯ ಪ್ರಮುಖ ನೀರಾವರಿ ಪ್ರಸ್ತಾವನೆಗಳಿಗೆ ಮೂಗು ಮುರಿದು ಇವುಗಳಿಗೆ ತಿಲಾಂಜಲಿ ನೀಡಿದ ಕೇಂದ್ರ ಸರ್ಕಾರ ತಮಿಳುನಾಡಿನ ಹಿತಾಸಕ್ತಿ ಕಾಪಾಡುವ ರಾಸಿಮಣಲ್ ಯೋಜನೆಗೆ ಹಸಿರು ನಿಶಾನೆ ತೋರುವುದು ಅಚ್ಚರಿಯೇನೂ ಆಗದು.
ತಮಿಳುನಾಡು ಈಗ ತಯಾರಿಸುವ ನೂತನ ಯೋಜನೆಯಲ್ಲಿ ಮೇಕೆದಾಟು ಯೋಜನೆಯಿಂದ ಮೀಸಲು ಅರಣ್ಯದ ಮೂಲ ನಿಯಮಾವಳಿ ಉಲ್ಲಂಘನೆಯಾಗುವುದಲ್ಲದೆ ಆನೆ ಕಾರಿಡಾರ್ ಮೂಲ ಸಂರಕ್ಷಣೆಗೂ ಧಕ್ಕೆಯಾಗಲಿದೆ ಎಂಬ ಪ್ರಸ್ತಾಪವಿದೆ. ಇಂತಹ ಪ್ರಸ್ತಾವನೆಗೆ ಪೂರಕವಾಗಿ ಈ ಹಿಂದೆಯೇ ಕೇಂದ್ರ ಪರಿಸರ ಇಲಾಖೆ ಇದೇ ವಿಷಯವನ್ನು ಮುಂದಿಟ್ಟುಕೊಂಡು ಮೇಕೆದಾಟು ಯೋಜನೆ ಸೂಕ್ತವಲ್ಲ ಮತ್ತು ಸಮಂಜಸವಲ್ಲ ಎಂಬ ಅಭಿಪ್ರಾಯಕ್ಕೆ ಬಂದಿರುವುದು ಗಮನಾರ್ಹ.
ಇತ್ತ ಕಳಸಾ ಬಂಡೂರಿ ನಾಲೆ ಕಾಮಗಾರಿಗಳು ಪೂರ್ಣಗೊಳ್ಳುವುದು ಉತ್ತರ ಕರ್ನಾಟಕದ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ. ಹುಬ್ಬಳ್ಳಿ-ಧಾರವಾಡದ ಅವಳಿ ನಗರಗಳಲ್ಲದೆ ಗದಗ ಜಿಲ್ಲೆಯ ಹಲವಾರು ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸುವ ಕಳಸಾ ಬಂಡೂರಿ ನಾಲೆ ಕಾಮಗಾರಿಗಳಿಗೆ ಇದುವರೆಗೂ ಕೇಂದ್ರ ಪರಿಸರ ಇಲಾಖೆಯಿಂದ ಸೂಕ್ತ ಅನುಮತಿ ಮತ್ತು ಸಮರ್ಪಕ ಸಮ್ಮತಿ ದೊರೆತಿಲ್ಲ. ಮಿಗಿಲಾಗಿ ಮಹದಾಯಿ ನದಿ ನೀರು ಕರ್ನಾಟಕಕ್ಕೆ ಸಿಗಬಾರದೆಂದು ಪಣ ತೊಟ್ಟಿರುವ ಗೋವಾ ರಾಜ್ಯ ಒಂದಲ್ಲ ಒಂದು ರೀತಿಯಲ್ಲಿ ಕಳಸಾ ಬಂಡೂರಿ ಕಾಮಗಾರಿಗೆ ಅಡ್ಡಗಾಲು ಹಾಕಿರುವುದು ಗಂಭೀರ.
ಉತ್ತರ ಕರ್ನಾಟಕದಿಂದಲೇ ಬಹುತೇಕ ಮಂದಿ ಬಿಜೆಪಿ ಸಂಸದರು ಲೋಕಸಭೆಗೆ ಪದೇ, ಪದೇ ಆರಿಸಿ ಬಂದರೂ ಕಳಸಾ ಬಂಡೂರಿ ಕಾಮಗಾರಿಗಳ ಮುಂದುವರಿಕೆ ಕುರಿತು ಕೇಂದ್ರ ಸರ್ಕಾರವನ್ನು ಮನವೊಲಿಸಲು ಸಾಧ್ಯವಾಗದಿರುವುದು ದುರದೃಷ್ಟಕರ. ಒಟ್ಟಿನಲ್ಲಿ ಕರ್ನಾಟಕದ ಯಾವುದೇ ನೀರಾವರಿ ಯೋಜನೆ ಸುಗಮವಾಗಿ ಕೇಂದ್ರದ ಸಂಪೂರ್ಣ ಅನುಮತಿಗಳ ಸಹಕಾರದೊಂದಿಗೆ ಜಾರಿಯಾದ ಇತಿಹಾಸವಿಲ್ಲ. ಇದು ರಾಜ್ಯದ ಮಟ್ಟಿಗೆ ಒಂದು ಶಾಪ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ರಾಜಕೀಯ ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ರಾಜ್ಯದ ಪ್ರತಿಷ್ಟಿತ ನೀರಾವರಿ ಯೋಜನೆಗಳ ಹಣೆಬರಹ ಮಾತ್ರ ಬದಲಾಗದಿರುವುದು ಈ ನಾಡಿನ ದುರದೃಷ್ಟ ಕೂಡಾ.


