Menu

15 ಸಾವಿರ ರೂ.ಗೆ ದುಡಿಯುತ್ತಿದ್ದ 22ರ ಯುವಕ ರಾಮನ ದುಡ್ಡು ಕದ್ದು ಕೋಟ್ಯಾಧಿಪತಿಯಾದ

ಮಾಸಿಕ 15 ಸಾವಿರ ರೂ. ಸಂಬಳ ಪಡೆಯುತ್ತಿದ್ದ 22 ವರ್ಷದ ಯುವಕ ಬ್ಯಾಂಕ್‌ನ ಔಟ್‌ಸೋರ್ಸಿಂಗ್ ಸಿಬ್ಬಂದಿ ಅಯೋಧ್ಯೆ ಶ್ರೀರಾಮ ಮಂದಿರದ ಹಣ ಕದ್ದು ಕೋಟ್ಯಾಧಿಪತಿಯಾಗಿ ಮೆರೆಯುತ್ತಿರುವುದು ಬಯಲಾಗಿದೆ. ಈಗ ಪೊಲೀಸ್‌ ಅತಿಥಿಯಾಗಿದ್ದಾನೆ.

ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಅಕ್ರಮ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಉತ್ತರ ಪ್ರದೇಶ ಪೊಲೀಸರು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಕೈಗೊಂಡಿದ್ದಾರೆ. 22 ವರ್ಷ ವಯಸ್ಸಿನ, ತಿಂಗಳಿಗೆ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಬ್ಯಾಂಕ್‌ನ ಔಟ್‌ಸೋರ್ಸಿಂಗ್ ಸಿಬ್ಬಂದಿ ಅನುಕಲ್ಪ್ ಮಿಶ್ರಾ, ರಾಮನ ದುಡ್ಡು ಕದ್ದು ಕೋಟ್ಯಾಧಿಪತಿಯಾಗಿದ್ದು, ಆತನ ಆದಾಯದ ಮೂಲಗಳ ಬಗ್ಗೆ ಪೊಲೀಸರು ತತಿಖೆ ತೀವ್ರಗೊಳಿಸಿದ್ದಾರೆ.

ಆರೋಪಿ ಅನುಕಲ್ಪ್ ಮಿಶ್ರಾ ಕಳೆದ ವರ್ಷ ಅಯೋಧ್ಯೆಯಲ್ಲಿ 65 ಲಕ್ಷ ರೂಪಾಯಿ ಮೌಲ್ಯದ ಮನೆಯನ್ನುತ ಖರೀದಿಸಿದ್ದಾನೆ. ಸ್ವಗ್ರಾಮ ಬಸಾವಾ ಹೊರವಲಯದಲ್ಲಿ ಅತ್ಯಾಧುನಿಕ ಫಾರ್ಮ್‌ಹೌಸ್ ನಿರ್ಮಿಸಿದ್ದಾನೆ. ಕೆಲವೇ ದಿನಗಳಮೊದಲು ‘ಮಹೀಂದ್ರಾ ಸ್ಕಾರ್ಪಿಯೋ’ ಎಸ್‌ಯುವಿ ಬುಕ್ ಮಾಡಿದ್ದ ಎಂಬುದು ಪತ್ತೆಯಾಗಿದೆ.

ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಹೊಸ ಬ್ರ್ಯಾಂಡೆಡ್ ಮೋಟಾರ್ ಸೈಕಲ್ ಖರೀದಿ ಮಾಡಿದ್ದ ಆತ, ಏಪ್ರಿಲ್‌ನಲ್ಲಿ ತನ್ನ ಗ್ರಾಮಕ್ಕೆ ಪ್ರಭಾವಿ ಗಣ್ಯರನ್ನು ಕರೆಸಿ, ದುಬಾರಿ ವೆಚ್ಚದಲ್ಲಿ 7 ದಿನ ಧಾರ್ಮಿಕ ಆಚರಣೆ ಆಯೋಜಿಸಿದ್ದನು.

ಕೌಶಲ್ಪುರಿಯಲ್ಲಿರುವ ಅನುಕಲ್ಪ್ ಮಿಶ್ರಾ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಅಡಗಿಸಿಟ್ಟಿದ್ದ ಪ್ರಮುಖ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅನುಕಲ್ಪ್ ಮಿಶ್ರಾ ಮಾತ್ರವಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿ ಬಂಧನದಲ್ಲಿರುವ ಇತರ ಏಳು ಆರೋಪಿಗಳ ಚರ ಮತ್ತು ಸ್ಥಿರ ಆಸ್ತಿಗಳ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ರಾಮನ ಹಣದಲ್ಲಿ ಅಕ್ರಮ ಆಸ್ತಿ ಗಳಿಸಿರುವುದು ಸಾಬೀತಾದರೆ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಣೆ

ರಾಮ ಮಂದಿರ ದೇಣಿಗೆ ಅಕ್ರಮ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಬೇಸಿಗೆ ರಜೆ ಮುಗಿದ ಬಳಿಕವಷ್ಟೇ ಅರ್ಜಿಯನ್ನು ನಿಯಮಿತವಾಗಿ ವಿಚಾರಣೆಗೆ ಪಟ್ಟಿ ಮಾಡಲು ನಿರ್ಧರಿಸಿದೆ.

ನ್ಯಾಯಮೂರ್ತಿಗಳಾದ ನ್ಯಾ. ಎಂ. ಎಂ. ಸುಂದರೇಶ್ ಮತ್ತು ನ್ಯಾ. ಶೀಲ್ ನಾಗು ಅವರನ್ನೊಳಗೊಂಡ ರಜಾಕಾಲದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರು ತುರ್ತು ವಿಚಾರಣೆಗೆ ಪಟ್ಟು ಹಿಡಿದಾಗ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠವು, ಈಗಲೇ ಅರ್ಜಿ ವಿಚಾರಣೆ ನಡೆಸಲು ಇಷ್ಟೊಂದು ಅವಸರ ಏಕೆ, ಆಕಾಶವೇನೂ ಉರುಳಿ ಬೀಳುತ್ತಿಲ್ಲ, ರಜೆ ಮುಗಿದ ಬಳಿಕ ನೋಡೋಣ ಎಂದು ಹೇಳಿದೆ.

ಹಗರಣದ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರದ ವಿಶೇಷ ತನಿಖಾ ತಂಡ ನಡೆಸುತ್ತಿದೆ. ಆಡಳಿತಾತ್ಮಕ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ಶಂಕೆಯಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.

Related Posts

Leave a Reply

Your email address will not be published. Required fields are marked *