Menu

ಗೋದಾವರಿ-ಕಾವೇರಿ ನದಿ ಜೋಡಣೆಗೆ ಚಂದ್ರಬಾಬು ನಾಯ್ಡು ಆಗ್ರಹ

ದಕ್ಷಿಣ ಭಾರತದ ಪ್ರಮುಖ ನದಿಗಳಾದ ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ಯೋಜನೆಯನ್ನು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಯೋಜನೆ’ಯಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಈಗಾಗಲೇ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವಿನ ‘ಕೆನ್-ಬೆತ್ವಾ’ ಯೋಜನೆ ಹಾಗೂ ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವಿನ ‘ಪಾರ್ವತಿ-ಕಾಳಿಸಿಂಧು-ಚಂಬಲ್’ ನದಿ ಜೋಡಣೆ ಯೋಜನೆಗಳನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದೆ. ಇದೇ ಮಾದರಿಯಲ್ಲಿ ಗೋದಾವರಿ ಮತ್ತು ಕಾವೇರಿ ನದಿ ಜೋಡಣೆಯಾಗಲಿ ಎಂದಿದ್ದಾರೆ.

​ಈ ಹಿಂದೆ 1983 ರಲ್ಲಿ ಎನ್.ಟಿ. ರಾಮರಾವ್ ಅವರ ನಾಯಕತ್ವದಲ್ಲಿ ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾ ರಾಷ್ಟ್ರ ರಾಜ್ಯಗಳು ಒಟ್ಟಾಗಿ ಸೇರಿ ಚೆನ್ನೈನ ಕುಡಿಯುವ ನೀರಿಗಾಗಿ 15 ಟಿಎಂಸಿ ನೀರನ್ನು ಒದಗಿಸಿದ್ದ ಐತಿಹಾಸಿಕ ಒಕ್ಕೂಟ ವ್ಯವಸ್ಥೆಯ ಉದಾಹರಣೆಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

​ ಪ್ರಸ್ತುತ ದೇಶದಲ್ಲಿ ಒಂದು ಕಡೆ ಭೀಕರ ಪ್ರವಾಹ ಬಂದರೆ, ಮತ್ತೊಂದು ಕಡೆ ತೀವ್ರ ಬರಗಾಲವಿರುತ್ತದೆ. ಈ ವರ್ಷ ‘ಎಲ್ ನಿನೋ’ ಪ್ರಭಾವದಿಂದಾಗಿ ತುಂಗಭದ್ರಾ ಹಾಗೂ ಆಲ್ಮಟ್ಟಿ ಜಲಾಶಯಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ಒಳಹರಿವು ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ನದಿಗಳನ್ನು ಜೋಡಿಸುವುದೊಂದೇ ಇರುವ ಏಕೈಕ ಮಾರ್ಗವಾಗಿದೆ. ಹೆಚ್ಚುವರಿ ನೀರಿರುವ ನದಿಗಳಿಂದ ಕೊರತೆಯಿರುವ ನದಿಗಳಿಗೆ ನೀರನ್ನು ಹರಿಸುವ ಮೂಲಕ ಬರಗಾಲವನ್ನು ಸಮರ್ಥವಾಗಿ ಎದುರಿಸಬಹುದು. ಇದರಿಂದ ರಾಜ್ಯಗಳ ನಡುವಿನ, ಜಿಲ್ಲೆಗಳ ನಡುವಿನ ಹಾಗೂ ರೈತರ ನಡುವಿನ ನೀರಿನ ಸಂಘರ್ಷಗಳನ್ನು ಸಂಪೂರ್ಣವಾಗಿ ತಡೆಯಬಹುದು” ಎಂದು ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟರು.

​ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ದೇಶವು ತಂತ್ರಜ್ಞಾನ, ಹೆದ್ದಾರಿ ಹಾಗೂ ದೂರಸಂಪರ್ಕ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, ನದಿಗಳ ಜೋಡಣೆ ಪ್ರಕ್ರಿಯೆಯೂ ಅವರ ನೇತೃತ್ವದಲ್ಲಿ ಯಶಸ್ವಿಯಾಗಲಿದೆ ಎಂಬ ದೃಢ ವಿಶ್ವಾಸವನ್ನು ವ್ಯಕ್ತಪಡಿಸಿದರು. ರಾಜ್ಯಗಳ ಒಳಗೆ ನದಿಗಳ ಜೋಡಣೆ (Intra-linking) ಯಶಸ್ವಿಯಾದ ನಂತರ, ರಾಜ್ಯಗಳ ನಡುವಿನ ಜೋಡಣೆಗೆ (Inter-linking) ಎಲ್ಲರೂ ಒಪ್ಪಿಗೆ ನೀಡಬೇಕು ಎಂದು ಚಂದ್ರಬಾಬು ನಾಯ್ಡು ಅವರು ಕರೆ ನೀಡಿದರು.

Related Posts

Leave a Reply

Your email address will not be published. Required fields are marked *