Menu

ಬೆಂಗಳೂರಿನಲ್ಲಿ ದಿನಕ್ಕೆ 1,775 ಟನ್ ಸಂಸ್ಕರಣೆಯಾಗದ ಕಸ ರಾಜಕಾಲುವೆಗೆ: ಆರ್‌ ಅಶೋಕ

ಬೆಂಗಳೂರಿನಲ್ಲಿ ಪ್ರತಿದಿನ 1,775 ಟನ್ ಕಸ ಸಂಸ್ಕರಣೆಯಾಗದೇ ರಸ್ತೆ, ರಾಜಕಾಲುವೆ ಸೇರುತ್ತಿದೆ. ನಿಮ್ಮ ಮುಖ್ಯಮಂತ್ರಿ @DKShivakumar ಅವರ “ಬ್ರ್ಯಾಂಡ್ ಬೆಂಗಳೂರು” ಅಂದರೆ ಸಾರ್ವಜನಿಕರು ಕಲುಷಿತ ನೀರು ಕುಡಿದು ಸಾಯಬೇಕಾ,  ಕಸದ ರಾಶಿಯಲ್ಲಿ ನರಳಬೇಕಾ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಪ್ರಶ್ನಿಸಿದ್ದಾರೆ.

ರೀಲ್ಸ್ ಮಂತ್ರಿ @krishnabgowda ರೇ, ನಿಮ್ಮ ಕ್ಯಾಮೆರಾ ಕಣ್ಣಿಗೆ ಬೆಂಗಳೂರಿನ ಈ ನರಕ ದರ್ಶನವಾಗುತ್ತಿಲ್ಲವೇ?, ಹೆಚ್. ಎಸ್.ಆರ್ ಲೇಔಟ್‌ನಲ್ಲಿ ಕಲುಷಿತ ಕಾವೇರಿ ನೀರು ಕುಡಿದು 60ಕ್ಕೂ ಹೆಚ್ಚು ಕುಟುಂಬಗಳು ರೋಗಗ್ರಸ್ತವಾಗಿವೆ, ಮಕ್ಕಳು ಆಸ್ಪತ್ರೆ ಸೇರಿದ್ದಾರೆ. ಕುಡಿಯುವ ನೀರಿನಲ್ಲಿ  278 ಕೊಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ.  ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಜಲಮಂಡಳಿ ಜೂನ್ 6ರಿಂದ ಕಂಪ್ಲೇಂಟ್ ಕೊಟ್ಟರೂ ಕಣ್ಣು ಬಿಟ್ಟಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿ ಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ನಿಮ್ಮ ಹಿಂದಿನ ಬೆಂಗಳೂರು ಅಭಿವೃದ್ಧಿ ಮಂತ್ರಿಗಳು ಬಿಟ್ಟು ಹೋಗಿರುವ “ಸಾಕ್ಷಿ ಗುಡ್ಡೆ”ಯನ್ನು ಸರಿಪಡಿಸಲು ತಾವು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಸ್ವಾಮಿ, ಬರೀ ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡಿ, ಜವಾಬ್ದಾರಿಯಿಂದ ನುಣುಚಿಕೊಂಡರೆ ಬೆಂಗಳೂರಿನ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದಿದ್ದಾರೆ.

ಮತ್ತೊಂದು ಪೋಸ್ಟ್‌ ಮಾಡಿದ್ದು, ಗ್ಯಾರೆಂಟಿ ಸಮಿತಿ ಅಂದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಂಗ್ರೆಸ್‌ನ ಅತೃಪ್ತ ನಾಯಕರನ್ನ, ಕಾರ್ಯಕರ್ತರನ್ನ ಸಾಕುವ “ಗಂಜಿ ಕೇಂದ್ರ”ವೇ, ಸಿಎಂ @DKShivakumar ಅವರೇ ಎಂದು ಪ್ರಶ್ನಿಸಿದ್ದಾರೆ.  ಸತ್ತವರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುತ್ತಿರುವ ಮಹಾ ಹಗರಣದ ಬಯಲಾದ ನಡುವೆಯೇ, ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮತ್ತಷ್ಟು ‘ಗ್ಯಾರೆಂಟಿ ಸಮಿತಿ’ಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆಯಲು ಹೊರಟಿದೆ ಈ ಲಜ್ಜೆಗೆಟ್ಟ @INCKarnataka ಸರ್ಕಾರ. ಇದು ಗ್ಯಾರೆಂಟಿ ಸಮಿತಿಯೋ ಅಥವಾ ಜನಸಾಮಾನ್ಯರ ಹಣದಲ್ಲಿ ಪಕ್ಷದವರನ್ನು ಸಾಕುವ ಅಧಿಕೃತ “ಗಂಜಿ ಕೇಂದ್ರ”ವೋ ಎಂದು ಟೀಕಿಸಿದ್ದಾರೆ.

ಹಣವಿಲ್ಲದೆ ಅಭಿವೃದ್ಧಿ ಕಾರ್ಯಗಳು ನಿಂತಿವೆ, ಸರ್ಕಾರಿ ಶಾಲೆಗಳ ಮಕ್ಕಳು ಪಠ್ಯಪುಸ್ತಕ, ಸಮವಸ್ತ್ರಕ್ಕಾಗಿ ಕಾಯುತ್ತಿದ್ದಾರೆ, ಕುಸಿಯುತ್ತಿರುವ ಕೊಠಡಿಗಳ ದುರಸ್ತಿಗೆ, ಮೊಟ್ಟೆಗೂ ದುಡ್ಡಿಲ್ಲದ ದುಸ್ಥಿತಿ ಇದೆ. ರಾಗಿ ಬೆಳೆದ ರೈತರು ಬೆಂಬಲ ಬೆಲೆ ಬಾಕಿಗಾಗಿ ಕಚೇರಿ ಅಲೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಹಣವನ್ನು ಪಕ್ಷದ ನಿರುದ್ಯೋಗಿ ಕಾರ್ಯಕರ್ತರಿಗೆ, ಅತೃಪ್ತ ನಾಯಕರಿಗೆ ಉದ್ಯೋಗ ನೀಡಲು ಬಳಸಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ತಿಳಿಸಿದ್ದಾರೆ.

ಹೊಸ ಗ್ಯಾರೆಂಟಿ ಸಮಿತಿ ರಚಿಸುವುದು ದೂರದ ಮಾತು, ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ, ಈಗಿರುವ ನಾಲಾಯಕ್ ಗ್ಯಾರೆಂಟಿ ಸಮಿತಿಗಳನ್ನು ವಿಸರ್ಜನೆ ಮಾಡಿ ಈವರೆಗೂ ಕೊಟ್ಟಿರುವ ಸಂಬಳ, ಸವಲತ್ತು ವಾಪಸ್‌  ಪಡೆಯಬೇಕು ಎಂದರು.

Related Posts

Leave a Reply

Your email address will not be published. Required fields are marked *