Menu

ಬಹುತ್ವ ಕಾಪಾಡಲು ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್‌ ಹೋರಾಟ ನಿರಂತರವಾಗಿರಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ನಮ್ಮ ಸಮಾಜದಲ್ಲಿರುವ ಬಹುತ್ವವನ್ನು ಕಾಪಾಡುವ ಅಗತ್ಯವಿದೆ. ಹರಿಪ್ರಸಾದ್‌ ಅವರು ಆರ್‌ಎಸ್‌ಎಸ್‌ನ ವಿರುದ್ಧವಾಗಿ, ಬಿಜೆಪಿಯ ವಿರುದ್ಧವಾಗಿ ಹೋರಾಟದ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಆ ಪ್ರಯತ್ನ ನಮ್ಮೆಲ್ಲಾ ಕಾರ್ಯಕರ್ತರಲ್ಲಿ ಬರಬೇಕು. ಈ ಪ್ರಯತ್ನ ಮಾಡಿದಾಗ ಮಾತ್ರ ನಾವು ಈ ದೇಶವನ್ನು ಉಳಿಸಲು, ಸಂವಿಧಾನವನ್ನು ಉಳಿಸಲು ಸಾಧ್ಯ. ಇಲ್ಲದೇ ಹೋದರೆ ಬಿಜೆಪಿಗರು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳುಗಳನ್ನು ಹರಡಿ ಜನರನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡುತ್ತಾರೆ ಎಂದು ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿ.ಕೆ. ಹರಿಪ್ರಸಾದ್‌ ನೂತನ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಸಂದರ್ಭದಲ್ಲಿ ಅಭಿನಂದಿಸಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ಒಂದು ಧರ್ಮ – ಒಂದು ರಾಷ್ಟ್ರ – ಒಂದು ಚುನಾವಣೆ ಎಂಬ ಮಾತುಗಳನ್ನು ಹೇಳುತ್ತಾರೆ. ಬಿಜೆಪಿಯವರು ಸರ್ವಾಧಿಕಾರದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ.  ಬಿಜೆಪಿಯವರಿಗಾಗಲಿ, ಆರ್‌ಎಸ್‌ಎಸ್‌ನವರಿಗಾಗಲಿ ನಮ್ಮ ಸಂವಿಧಾನದ ಬಗ್ಗೆ ನಂಬಿಕೆಯಿಲ್ಲ. ಈ ದೇಶದಲ್ಲಿ ಸಂವಿಧಾನದ ವಿರೋಧಿಗಳು ಯಾರಾದರೂ ಇದ್ದರೆ ಅದು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ.  ನಾವು ಯಾವಾಗಲೂ ಬಹುತ್ವದ ಪರವಾಗಿ ಇರುವಂತವರು. ಬಹುತ್ವವನ್ನು ರೂಪಿಸುವಂತಹ ಕೆಲಸವನ್ನು ಹಾಗೂ ಅದನ್ನು ಮುಂದುವರಿಸಿಕೊಂಡು ಹೋಗುವಂತಹ ಕೆಲಸ ನಮ್ಮದಾಗಿದೆ ಎಂದಿದ್ದಾರೆ.

ಬಿ.ಕೆ. ಹರಿಪ್ರಸಾದ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.  ಅವರಿಗೆ ಅಭಿನಂದನೆ,ಇಲ್ಲಿಯವರೆಗೆ ಅಧ್ಯಕ್ಷರಾಗಿ ಕೆಲಸ ಮಾಡಿದ ಡಿಕೆ ಶಿವಕುಮಾರ್‌ ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ. ನಾನು ಈ ರಾಜ್ಯದ ವಿರೋಧ ಪಕ್ಷದ ನಾಯಕನಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಡಿಕೆ ಶಿವಕುಮಾರ್‌ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಈ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಕಳೆದ ಮೂರು ವರ್ಷಗಳಿಂದ 1 ಲಕ್ಷದ 40 ಸಾವಿರಕ್ಕೂ ಹೆಚ್ಚೂ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ ಎಂದು ಹೇಳಿದರು.

ಹರಿಪ್ರಸಾದ್‌  ಸಾಮಾನ್ಯ ಕುಟುಂಬದಿಂದ ಬಂದಿರುವವರು. ಸಾಮಾನ್ಯ ಕಾರ್ಯಕರ್ತರಾಗಿರು 1972 ಇಸವಿಯಲ್ಲಿ ಬಂದು ಇಲ್ಲಿಯವರೆಗೆ  5 ದಶಕಕಾಂಗ್ರೆಸ್‌ ಪಕ್ಷದ ಕಾರ್ಯಕರ್ತನಾಗಿ ನಿಷ್ಠೆಯಿಂದ ಸೇವೆ ಮಾಡಿದ್ದಾರೆ. ವಿದ್ಯಾರ್ಥಿ ನಾಯಕನಾಗಿ, ಯುವ ಕಾಂಗ್ರೆಸ್‌ನ ನಾಯಕನಾಗಿ ಅನೇಕ ರಾಜ್ಯಗಳ ಉಸ್ತುವಾರಿಯನ್ನು ವಹಿಸಿಕೊಂಡು, ಸೇವಾದಳದ ಅಧ್ಯಕ್ಷನಾಗಿ ಸೇವೆ ಮಾಡಿದ್ದಾರೆ.  ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರ ನಿಷ್ಠೆ, ಸಿದ್ಧಾಂತಕ್ಕೆ ಬದ್ಧತೆ, ಕಾಂಗ್ರೆಸ್‌ ಕಾರ್ಯಕರ್ತನಾಗಿ ಅನೇಕ ಸ್ಥಾನಗಳಲ್ಲಿ ಕೆಲಸ ಮಾಡಿದ ಪರಿಣಾಮವಾಗಿ ಇವತ್ತು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಅವರಿಗೆ ಈ ನಿಟ್ಟಿನಲ್ಲಿ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಹರಿಪ್ರಸಾದ್‌ ಅವರು ಸಿದ್ಧಾಂತಕ್ಕೆ ಬದ್ದರಾಗಿರುವುದರಿಂದ ಕಾಂಗ್ರೆಸ್‌ ಅನ್ನು ಬಲಪಡಿಸುವಂತಹ ಶಕ್ತಿಯಿದೆ. ಕಾಂಗ್ರೆಸ್‌ನ ಮೂಲ ಸಿದ್ಧಾಂತವೇನಿದೆ,  ಸಂವಿಧಾನದ ಆಶಯಗಳೇನಿವೆ,  ಅವುಗಳನ್ನು ಜಾರಿ ಮಾಡುವಂತಹ ಪ್ರಯತ್ನಗಳನ್ನು ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ಬೂತ್‌ ಮಟ್ಟದಲ್ಲಿ ಶಿಬಿರಗಳನ್ನು ಮಾಡುವಂತಹ ಪ್ರಯತ್ನಗಳನ್ನು ಮಾಡಬೇಕು.  ಹರಿಪ್ರಸಾದ್‌ ಅವರು ಕೇವಲ ಚುನಾವಣೆಗೋಸ್ಕರ ಮಾಡಿರುವಂತದಲ್ಲ. 2028-29 ಚುನಾವಣೆಯಲ್ಲ, ಅದಕ್ಕಿಂತಲೂ ಮಿಗಿಲಾಗಿ ನಮ್ಮ ಪಕ್ಷದ ಸಿದ್ಧಾಂತ ಎಲ್ಲರಿಗೂ ತಿಳಿಯಬೇಕು.  ಪಕ್ಷದ ಸಿದ್ಧಾಂತವನ್ನು ಗಟ್ಟಿಗೊಳಿಸುವಂತಹ ಕೆಲಸವನ್ನು ಮಾಡಬೇಕು. ಈ ಕೆಲಸ ಹರಿಪ್ರಸಾದ್‌ ಮಾಡುತ್ತಾರೆ ಎನ್ನುವ ನಂಬಿಕೆ, ವಿಶ್ವಾಸ ನನಗಿದೆ. ಯಾಕಂದರೆ ಅವರ ಹೋರಾಟವನ್ನು ನಾನು ನೋಡಿದ್ದೇನೆ. ಅವರು ಯಾವತ್ತೂ ಕೂಡ ಆರ್‌ಎಸ್‌ಎಸ್‌ ವಿರುದ್ಧವಾಗಿ, ಬಿಜೆಪಿಯ ವಿರುದ್ಧವಾಗಿ, ಕೋಮುವಾದಿಯ ವಿರುದ್ಧವಾಗಿ ಕೆಲಸ ಮಾಡುವಂತಹ ವ್ಯಕ್ತಿ ಎನ್ನುವುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀವೆಲ್ಲರೂ ಕೂಡ ಹರಿಪ್ರಸಾದ್‌ ಅವರ ನಾಯಕತ್ವದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿ, 2028 ಹಾಗೂ 2029ರಲ್ಲೂ ಮತ್ತೊಮ್ಮೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. 2029ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ರಾಹುಲ್‌ ಗಾಂಧಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವ ಸಂಕಲ್ಪವನ್ನು ನೀವೆಲ್ಲರೂ ಮಾಡಬೇಕು. ಹರಿಪ್ರಸಾದ್‌ ಅವರ ನಾಯಕತ್ವದಲ್ಲಿ ಪಕ್ಷ ಸಧೃಡವಾಗಲಿ, ಬಲವಾಗಿ ಬೆಳೆಯಲಿ ಎಂದು ಆಶಿಸುತ್ತಾ, ನನ್ನ ಸಹಕಾರವನ್ನು ಸಂಪೂರ್ಣವಾಗಿ ಅವರ ಜೊತೆ ಧಾರೆ ಎರೆಯುತ್ತೇನೆ ಎಂಬ ಭರವಸೆ ನೀಡುತ್ತಿದ್ದೇನೆ ಎಂದರು.

Related Posts

Leave a Reply

Your email address will not be published. Required fields are marked *