ನಾಗ್ಪುರ ನಗರದ ನಿವಾಸಿ, ನೀಟ್ ಅಭ್ಯರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬಾತನಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ನೀಟ್-ಯುಜಿ ಮರುಪರೀಕ್ಷೆಯ ಹಾಲ್ ಟಿಕೆಟ್ ನೀಡಿದ್ದು, ಅಬುಧಾಬಿ ಇಂಡಿಯನ್ ಸ್ಕೂಲ್ ಅನ್ನು ಪರೀಕ್ಷಾಕೇಂದ್ರವಾಗಿ ನಿಯೋಜಿಸಿದೆ.
ಜೂನ್ 14 ರಂದು ನೀಡಿರುವ ಪ್ರವೇಶ ಪತ್ರದಲ್ಲಿ ಅಬುಧಾಬಿ ಇಂಡಿಯನ್ ಸ್ಕೂಲ್ ಅನ್ನು ಪರೀಕ್ಷಾ ಕೇಂದ್ರವಾಗಿ ನಿಯೋಜಿಸಿದೆ, ಆದರೆ ಆತ ಮೂರು ಸ್ಥಳೀಯ ಜಿಲ್ಲಾ ಕೇಂದ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದ. ಈಗ ವಿದ್ಯಾರ್ಥಿಗೆ 2,500 ಕಿ.ಮೀ ದೂರದ ವಿದೇಶಿ ಕೇಂದ್ರ ಸಿಕ್ಕಿರುವುದರಿಂದ ಇಡೀ ಕುಟುಂಬ ಕಂಗೆಟ್ಟು ಹೋಗಿದೆ.
ಸಾಮಾನ್ಯವಾಗಿ ಅನಿವಾಸಿ ಭಾರತೀಯರು ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾತ್ರ ವಿದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗುತ್ತದೆ. ಸ್ಥಳೀಯ ವಿದ್ಯಾರ್ಥಿ ಅಬ್ದುಲ್ಲಾಗೆ ಅಬುಧಾಬಿ ಕೇಂದ್ರ ಸಿಕ್ಕಿರುವುದರಿಂದ ಪೋಷಕರು ಎನ್‌ಟಿಎ ಸಹಾಯವಾಣಿ ಸಂಪರ್ಕಿಸಿದ್ದಾರೆ. ತಪ್ಪು ಸರಿಪಡಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಕುಟುಂಬಸ್ಥರು ಅನಿವಾರ್ಯವಾದರೆ ವಿದೇಶಕ್ಕಾದರೂ ಕಳುಹಿಸೋಣ ಎಂದು ತುರ್ತು ಪಾಸ್‌ಪೋರ್ಟ್ ಪ್ರಕ್ರಿಯೆ ಮತ್ತು ವಿಮಾನ ಟಿಕೆಟ್‌ಗಳ ವ್ಯವಸ್ಥೆ ಮಾಡಲು ಓಡಾಡಿದ್ದಾರೆ. ಈಗಾಗಲೇ ನೀಟ್ ಪೇಪರ್ ಲೀಕ್ ಪ್ರಕರಣದಿಂದ ಮಾನಸಿಕ ಒತ್ತಡದಲ್ಲಿದ್ದ ಅಬ್ದುಲ್ಲಾಗೆ ಈ ಹಾಲ್ ಟಿಕೆಟ್ ಎಡವಟ್ಟು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ನೀಟ್ ಪರೀಕ್ಷೆ ರದ್ದಾದ ನಂತರ ಎನ್‌ಟಿಎ ಪೋಷಕರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ, ಹಳೆಯ ಕೇಂದ್ರವನ್ನೇ ಉಳಿಸಿಕೊಳ್ಳುತ್ತೀರಾ ಅಥವಾ ಹೊಸ ಕೇಂದ್ರ ಬೇಕೇ ಎಂದು ಕೇಳಿತ್ತು. ನಾಗ್ಪುರ ವ್ಯಾಪ್ತಿಯಲ್ಲೇ ಹಳೆಯ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದ ಹಲವು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್‌ನಲ್ಲಿ ದೂರದ ಜಿಲ್ಲೆಗಳ ಮತ್ತು ಗ್ರಾಮಾಂತರ ಪ್ರದೇಶಗಳ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ. ಪೋಷಕರು ಕೇಳದಿದ್ದರೂ ಕೇಂದ್ರಗಳನ್ನು ಬದಲಾಯಿಸಿರುವುದು ಮತ್ತು ಪರೀಕ್ಷಾ ಶುಲ್ಕದ ಮರುಪಾವತಿಗೆ ಬ್ಯಾಂಕ್ ವಿವರಗಳನ್ನು ಪಡೆದು ಗೊಂದಲ ಸೃಷ್ಟಿಸಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟು ಹಾಕಿದೆ. ಡೇಟಾಬೇಸ್ ಪರಿಷ್ಕರಣೆಯಲ್ಲಿ ಉಂಟಾಗಿರುವ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ.


