ಸಹೋದರನಿಗೆ ಗಂಡಾಂತರವಿದೆ, ಪೂಜೆ ಮಾಡಿಸದಿದ್ದರೆ 10 ದಿನದಲ್ಲಿ ಸಾಯುತ್ತಾನೆ ಎಂದು ಹೆದರಿಸಿ ವೈಟ್‌ಪೀಲ್ಡ್‌ನ ಟೆಕ್ಕಿಯೊಬ್ಬರಿಂದ ವಂಚಕರು ಏಳು ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಪ್ರಕರಣ ಸಂಬಂಧ ನವೀದಾ ಸುಲ್ತಾನ ಮತ್ತು ಪರ್ವೇಜ್ ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಪೂಜೆಯ ನೆಪದಲ್ಲಿ ಖಾಸಗಿ ಸಂಸ್ಥೆಯ ಮಹಿಳಾ ಉದ್ಯೋಗಿಯಿಂದ ಏಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ವೈಟ್‌ಫೀಲ್ಡ್‌ನ ಅಂಬೇಡ್ಕರ್ ನಗರ ನಿವಾಸಿ ಮೋಯಿನ್ ಪಾಷಾ ನೀಡಿದ ದೂರಿನನ್ವಯ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿದ್ದು, ತನಿಖೆ ಮುಂದುವರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಮೋಯಿನ್ ಪಾಷಾ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಮೇ 23ರಂದು ಸ್ನೇಹಿತ ಕೇಳಿಕೊಂಡಿದ್ದಂತೆ ನವೀದಾ ಸುಲ್ತಾನ ಎಂಬಾಕೆಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದೆ. ಈ ವೇಳೆ ನನ್ನ ಸಹೋದರನನ್ನು ನೋಡಿದ ಆಕೆ ಈತನಿಗೆ ಗಂಡಾಂತರವಿದೆ. ಪೂಜೆ ಮಾಡಿಸದಿದ್ದರೆ 10 ದಿನದೊಳಗೆ ಸಾಯುತ್ತಾನೆ ಎಂದು ಬೆದರಿಸಿದ್ದಳು ಎಂಬುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಇದರಿಂದ ಹೆದರಿ ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿ ಸಿದ್ಧಪಡಿಸಿಕೊಂಡು ಮೇ 25ರಂದು ಮನೆಗೆ ಆರೋಪಿಗಳನ್ನು ಕರೆಸಿಕೊಂಡಿದ್ದೆ. ಮಧ್ಯರಾತ್ರಿ 1 ಗಂಟೆಯಿಂದ ಬೆಳಗಿನ ಜಾವದವರೆಗೆ ಪೂಜೆ ಮಾಡಲಾಗಿತ್ತು. ಪೂಜೆ ವೇಳೆ ಆರೋಪಿಗಳ ಸೂಚನೆಯಂತೆ ಮನೆಯಲ್ಲಿದ್ದ 35 ಗ್ರಾಂ ಚಿನ್ನಾಭರಣ ತಂದಿಡಲಾಗಿತ್ತು. ಕಬ್ಬಿಣದ ಪೆಟ್ಟಿಗೆಯೊಳಗೆ ಬಟ್ಟೆಯಲ್ಲಿ ಚಿನ್ನವಿಟ್ಟು ಗಂಟು ಹಾಕಿ 90 ದಿನ ತೆಗೆಯದಂತೆ ತಿಳಿಸಿದ್ದರಿಂದ ಅದನ್ನು ರೂಮಿನಲ್ಲಿ ಇಡಲಾಗಿತ್ತು. ಪೂಜೆಯ ಬಳಿಕ ಬೆಳಗಿನ ಜಾವ ಆರೋಪಿಗಳು ತೆರಳಿದ್ದರು. ಪೂಜೆಗಾಗಿ 30 ಸಾವಿರ ಸಾವಿರ ರೂ. ಖರ್ಚು ಮಾಡಲಾಗಿತ್ತು.
ಕೆಲವು ದಿನಗಳ ಬಳಿಕ ನವೀದಾ ಕರೆ ಮಾಡಿ 60 ಸಾವಿರ ರೂ. ಸಾಲ ನೀಡುವಂತೆ ಕೇಳಿದ್ದಳು. ಹಣ ನೀಡಲು ನಿರಾಕರಿಸಿದ್ದಕ್ಕೆ ಸಿಟ್ಟಾಗಿದ್ದಳು. ಆಕೆಯ ಮೇಲೆ ಅನುಮಾನಗೊಂಡು ಮನೆಗೆ ಬಂದು ಪೆಟ್ಟಿಗೆಯನ್ನು ತೆಗೆದು ನೋಡಿದ್ದಾಗ ಗಂಟು ಕಟ್ಟಿದ ಬಟ್ಟೆಯಲ್ಲಿದ್ದ ಚಿನ್ನ ನಾಪತ್ತೆಯಾಗಿತ್ತು. ಚಿನ್ನಾಭರಣ ನೀಡುವಂತೆ ಪ್ರಶ್ನಿಸಿದಾಗ ಕೊಡುವುದಾಗಿ ನೆಪಗಳನ್ನು ಹೇಳಿ ಈವರೆಗೂ ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


