ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವಿನ ಕಾನೂನು ಸಮರಕ್ಕೆ ಸಂಧಾನದ ಮೂಲಕ ಅಂತ್ಯ ಹಾಡಲು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಇಬ್ಬರೂ ಉನ್ನತ ಹುದ್ದೆಯಲ್ಲಿದ್ದು, ಸಾರ್ವಜನಿಕವಾಗಿ ಜಗಳ ಸರಿಯಲ್ಲ, ಮಾನನಷ್ಟ ಮೊಕದ್ದಮೆಯನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನು ಸಂಧಾನಕಾರರನ್ನಾಗಿ ನೇಮಕ ಮಾಡಿದೆ.
ಕೋರ್ಟ್‌ನ ಹೊರಗಡೆ ಇಬ್ಬರೂ ಕುಳಿತು ಮಾತನಾಡಿ ವಿವಾದ ಬಗೆಹರಿಸಿಕೊಳ್ಳಿ ಎಂದು ಎಂದಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರ ಪೀಠವು, ಈ ಅಧಿಕಾರಿಗಳ ಸುದೀರ್ಘ ಜಗಳದ ಬಗ್ಗೆ ಕಳವಳ ವ್ಯಕ್ತಪಡಿಸಿ, ಇಬ್ಬರೂ ಅತ್ಯುತ್ತಮ ಅಧಿಕಾರಿಗಳು. ನ್ಯಾಯಾಲಯದ ಮೆಟ್ಟಿಲೇರಿ ಜಗಳ ಮಾಡುವ ಮೂಲಕ ವೃತ್ತಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಇಬ್ಬರ ಕಡೆಯ ವಕೀಲರಿಗೆ ಸೂಚಿಸಿದೆ.
ಈ ಹಿಂದೆ ರೋಹಿಣಿ ಸಿಂಧೂರಿ ಸಂಧಾನಕ್ಕೆ ಒಪ್ಪಿಕೊಂಡಿರಲಿಲ್ಲ. ಸುಪ್ರೀಂಕೋರ್ಟ್ ಕೊಟ್ಟ ಕೆಲ ಸಲಹೆ ಸೂಚನೆಗಳ ಮೇರೆಗೆ ರೋಹಿಣಿ ಸಿಂಧೂರಿ ಸಂಧಾನಕ್ಕೆ ಒಪ್ಪಿಕೊಂಡಿದ್ದಾರೆ. 2023ರಲ್ಲಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಈ ವಿವಾದ ಆರಂಭವಾಗಿತ್ತು. ರೋಹಿಣಿ ಸಿಂಧೂರಿ ಜಾಲಹಳ್ಳಿಯಲ್ಲಿ ಬೃಹತ್ ಬಂಗಲೆ ನಿರ್ಮಿಸಿದ್ದಾರೆ, ತಮ್ಮ ಆಸ್ತಿ ವಿವರದಲ್ಲಿ ಘೋಷಿಸಿಲ್ಲ ಎಂದು ರೂಪಾ ಆರೋಪಿಸಿದ್ದರು. ಕೆಲವು ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಉನ್ನತ ಅಧಿಕಾರಿಗಳ ಈ ಜಗಳ ಆಡಳಿತದ ಮೇಲೂ ಪರಿಣಾಮ ಬೀರುತ್ತಿರುವುದನ್ನು ಗಮನಿಸಿದ ಅಂದಿನ ರಾಜ್ಯ ಸರ್ಕಾರ, ಇಬ್ಬರಿಗೂ ಹುದ್ದೆ ನೀಡದೆ ಎತ್ತಂಗಡಿ ಮಾಡಿತ್ತು.
ರೂಪಾ ಅವರ ಆರೋಪಗಳಿಂದ ತಮ್ಮ ಘನತೆಗೆ ಧಕ್ಕೆಯಾಗಿದೆ ಮತ್ತು ಮಾನಸಿಕ ಕಿರುಕುಳವಾಗಿದೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ, ರೂಪಾ ಅವರಿಗೆ ಲೀಗಲ್ ನೋಟಿಸ್ ನೀಡಿದ್ದರು. ಬೇಷರತ್ ಕ್ಷಮೆ ಯಾಚಿಸಬೇಕು ಹಾಗೂ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.
ಮಾರ್ಚ್ 2023 ರಲ್ಲಿ ಬೆಂಗಳೂರಿನ ನ್ಯಾಯಾಲಯವು ಸಿಂಧೂರಿ ಅವರ ದೂರನ್ನು ಪುರಸ್ಕರಿಸಿ ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿಕೊಂಡಿತ್ತು. ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರೂಪಾ ಹೈಕೋರ್ಟ್‌ಗೆ ಹೋಗಿದ್ದರು. ಹೈಕೋರ್ಟ್ ಅರ್ಜಿ ವಜಾಗೊಳಿಸಿತ್ತು. ಪ್ರಕರಣ ಮತ್ತೆ ಸುಪ್ರೀಂ ಕೋರ್ಟ್ ಮುಂದೆ ಬಂದಿದ್ದು, ನಿವೃತ್ತ ನ್ಯಾಯಮೂರ್ತಿಗಳ ಸಮ್ಮುಖ ಸಂಧಾನಕ್ಕೆ ಸಲಹೆ ಮಾಡಿದೆ.


