ಈ ವೇಳೆಗಾಗಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯಬೇಕಿದ್ದ ಮುಂಗಾರು ಮಳೆ ಸುರಿಯದೆ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ 108 ಅಡಿ. ಈ ಬಾರಿ ಮಳೆಯ ಅಭಾವದಿಂದಾಗಿ ಡ್ಯಾಂ ಸಂಪೂರ್ಣ ಖಾಲಿಯಾಗುವ ಹಂತ ತಲುಪಿದೆ.
ಈ ಹಿಂದೆ 2019 ರಲ್ಲಿ ಜಲಾಶಯದ ಮಟ್ಟ 80 ಅಡಿಗೆ ಕುಸಿದಿತ್ತು. ಕೆಆರ್ಎಸ್ ಡ್ಯಾಂನಲ್ಲಿ 11.399 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಇದರಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಇದ್ದು, ಬಳಕೆಗೆ ಲಭ್ಯವಿರುವುದು ಮಾತ್ರ 6 ಟಿಎಂಸಿ ನೀರು.
ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ತಳ ಸೇರುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಪ್ರಮುಖ ನಗರಗಳಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲ ಕೆಆರ್ಎಸ್ ಆಗಿರುವುದರಿಂದ ಬೆಂಗಳೂರಿಗರಿಗೆ ಕುಡಿಯುವ ನೀರಿನ ಅಭಾವ ಕಾಡಲಿದೆ.
ಜೂನ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರ ತಮಿಳುನಾಡಿಗೆ 9.19 ಟಿಎಂಸಿ ಕೋಟಾದ ನೀರನ್ನು ಹರಿಸಬೇಕಾಗಿದೆ. ಆದರೆ ಕೆಆರ್ಎಸ್ ಜಲಾಶಯದಲ್ಲೇ ಬಳಕೆಗೆ ಇರುವುದು ಆರು ಟಿಎಂಸಿ ನೀರು. ಇದರಿಂದಾಗಿ ಉಭಯ ರಾಜ್ಯಗಳ ನಡುವೆ ಮತ್ತೆ ಕಾವೇರಿ ವಿವಾದದ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮುಂಗಾರು ಮಳೆ ಚುರುಕಾಗಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರದಿದ್ದರೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ನೀರಿನ ಸಮಸ್ಯೆ ಬಾಧಿಸಲಿದೆ.


