Menu

ಯುದ್ಧ ಭೀತಿ: ಇರಾನ್‌ ತೊರೆಯುವಂತೆ ಭಾರತೀಯರಿಗೆ ಸೂಚನೆ

ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದ ಬಳಿಕ ಪ್ರತಿಯಾಗಿ ಇಸ್ರೇಲ್‌ ಇರಾನ್‌ ಮೇಲೆ ದಾಳಿ ಮಾಡಿದೆ. ಪರಿಣಾಮವಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿ ಹಿನ್ನೆಲೆ ಇರಾನ್‌ನಲ್ಲಿರುವ ಭಾರತೀಯ ನಾಗರಿಕರು ಸಾಧ್ಯವಾದಷ್ಟು ಬೇಗ ದೇಶ ತೊರೆಯುವಂತೆ ಭಾರತ ಸರ್ಕಾರ ಸಲಹೆ ನೀಡಿದೆ. ಭಾರತೀಯರು ಅನಗತ್ಯವಾಗಿ ಇರಾನ್‌ಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದೆ.

ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೊಸ ಪ್ರಯಾಣ ಸಲಹೆ ಬಿಡುಗಡೆ ಮಾಡಿದ್ದು, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲಾ ಭಾರತೀಯ ನಾಗರಿಕರು ಇರಾನ್‌ಗೆ ಪ್ರಯಾಣ ಕೈಗೊಳ್ಳಬಾರದು. ಇರಾನ್‌ನಲ್ಲಿ ಇರುವವರು ಲಭ್ಯವಿರುವ ಸಾರಿಗೆ ವ್ಯವಸ್ಥೆ ಬಳಸಿಕೊಂಡು ಆದಷ್ಟು ಬೇಗ ದೇಶ ತೊರೆಯಬೇಕು ಎಂದು ಭಾರತೀಯ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳು, ಉದ್ಯಮಿಗಳು, ಯಾತ್ರಿಕರು, ಪ್ರವಾಸಿಗರು ಸೇರಿದಂತೆ ಇರಾನ್‌ನಲ್ಲಿರುವ ಎಲ್ಲಾ ಭಾರತೀಯರಿಗೆ ಕೇಂದ್ರ ಸರ್ಕಾರ ಈ ಸಲಹೆ ಪ್ರಕಟಿಸಿದೆ. ಫೆಬ್ರವರಿ ಅಂತ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಗಳ ನಂತರ ಸಂಘರ್ಷ ತೀವ್ರಗೊಂಡಾಗ 9,000 ಭಾರತೀಯರು ಇರಾನ್‌ನಲ್ಲಿ ನೆಲೆಸಿದ್ದರು. 1,800 ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದು, ಇನ್ನೂ 7,500 ಭಾರತೀಯರು ಅಲ್ಲಿಯೇ ಉಳಿದಿದ್ದಾರೆ.

ಟೆಹ್ರಾನ್‌ನ ಇಮಾಮ್ ಖಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ವಾಯುಪ್ರದೇಶವನ್ನು ಬಂದ್ ಮಾಡಲಾಗಿದ್ದು, ಭದ್ರತಾ ಕ್ರಮ ಬಿಗಿಗೊಳಿಸಲಾಗಿದೆ. ಇರಾನ್‌ನ ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿರುವ ಸೇನಾ ಗುರಿಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್, ಇಸ್ರೇಲ್ ನಡೆಸಿದ  ದಾಳಿಯಲ್ಲಿ ವಾಯುಮಾರ್ಗದಿಂದ ಉಡಾಯಿಸುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿದೆ ಎಂದು ಆರೋಪಿಸಿದೆ.

Related Posts

Leave a Reply

Your email address will not be published. Required fields are marked *