ನ್ಯಾಯಮಂಡಳಿ ಮತ್ತು ಲೋಕಾಯುಕ್ತ ಪ್ರತ್ಯೇಕವಾಗಿ ಇಂತಹ ಪ್ರಕರಣಗಳನ್ನು ಗಮನಿಸಿ ಸುಮೋಟೋ ತನಿಖೆ ನಡೆಸಿದರೂ. ಸರ್ಕಾರ ಈ ಗಂಭೀರ ವರದಿಗಳನ್ನು ಗಮನಿಸಿ ಸೂಕ್ತ ಕ್ರಮ ಜರುಗಿಸದಿರುವುದು ನಿಜಕ್ಕೂ ಖೇದಕರ.
ಜೂನ್ ಐದು ವಿಶ್ವ ಪರಿಸರ ದಿನ. ನಾವಿಂದು ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಲು ಮುಂದಾಗಬೇಕಿದೆ. ಜಾಗತಿಕ ಮಟ್ಟದಲ್ಲಿ ಉಂಟಾದ ಯುದ್ಧ ಮತ್ತು ಜಲಮಾಲಿನ್ಯದಿಂದ ಲಕ್ಷಾಂತರ ಟನ್ ಪ್ರಮಾಣದ ರಾಸಾಯನಿಕ ವಸ್ತುಗಳು ಗಾಳಿ ಮತ್ತು ನೀರನ್ನು ಕಲುಷಿತಗೊಳಿಸಿವೆ . ಮನುಷ್ಯನ ಸ್ವಾರ್ಥ ಚಿಂತನೆ ಮತ್ತು ಅಭೀಷ್ಟೆಗಳಿಗೆ ಪ್ರಕೃತಿಯ ಮಾತೆ ಇಂದು ಇನ್ನಿಲ್ಲದಂತೆ ಪರಿಪಪಿಸುವಂತಾಗಿದೆ.
ಒಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿಂದು ದಿನೇ ದಿನೇ ಕಾಡಿನ ಪ್ರಮಾಣ ಮತ್ತು ವಿಸ್ತೀರ್ಣ ಕಡಿಮೆಯಾಗುತ್ತಿದೆ. ನಗರೀಕರಣದ ಪ್ರಭಾವವಿಂದು ಗ್ರಾಮೀಣ ಸೊಗಡನ್ನು ಕಸಿದಿದೆ. ಬೆಟ್ಟ , ಗುಡ್ಡಗಳಿಂದು ಮಾಯವಾಗಿದೆ. ಜೀವನದಿಗಳು ಬತ್ತುವ ಸ್ಥಿತಿಯಲ್ಲಿದೆ . ಮೀಸಲು ಮತ್ತು ದಂಡಕಾರಣ್ಯಗಳಿಂದು. ಬಯಲು ಪ್ರದೇಶಗಳಾಗಿ ಪರಿವರ್ತಿತವಾಗುವ ಅಪಾಯದಂಚಿನಲ್ಲಿದೆ, ಪ್ರಕೃತಿ ಮಾರಕ ಗಣಿಗಾರಿಕೆ ಮತ್ತು ವಾಣಿಜ್ಯಮಯ ಚಟುವಟಿಕೆಗಳಿಂದ ಇಂದು ಸಂಪತ್‌ಭರಿತ ಅರಣ್ಯ ಪ್ರದೇಶವಿಂದು ದಿನೇ ದಿನೇ ನಶಿಸುವಂತಾಗಿದೆ. ಸಾಮಾಜಿಕ ಮತ್ತು ಮೀಸಲು ಕಾಡು ಹಾಗೂ ಗೋಮಾಳವೆಲ್ಲವೂ ಇಂದು ರಿಯಲ್ ಎಸ್ಟೇಟ್ ಮತ್ತು ಭೂ ಬಕಾಸುರರ ಖಾಸಗಿ ಸ್ವತ್ತಾಗಿ ಪರಿಣಮಿಸಿರುವುದು ಖೇದಕರ.
ಕೆರೆ, ಕುಂಟೆಗಳಿಂದು ಅವನತಿಯ ಅಂಚಿನಲ್ಲಿವೆ. ರಾಜ್ಯದ ಸಾವಿರಾರು ಕೆರೆ ಕುಂಟೆಗಳು ಅತಿಕ್ರಮಣವಾಗಿ ಇದೇ ಜಾಗದಲ್ಲಿ ಕಾಂಕ್ರೀಟು ಕಟ್ಟಡಗಳು ತಲೆ ಎತ್ತಿವೆ. ಅರಣ್ಯ ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಸಾವಿರಾರು ಕೆರೆ ಕುಂಟೆಗಳ ಜೀರ್ಣೋದ್ದಾರದ ಕಾರ್ಯಕ್ಕೆ ಸರ್ಕಾರದ ಮುತುವರ್ಜಿ ಅತ್ಯಲ್ಪ. ಜೀವ ನದಿಗಳ ಬದಿಯಲ್ಲಿ ಅಕ್ರಮ ಮರಳು ದಂಧೆ ಮುಂದುವರಿದಿದೆ. ಇದನ್ನು ತಡೆಯಬೇಕೆಂಬ ಕಾನೂನು ಮತ್ತು ಕಟ್ಟುನಿಟ್ಟಿನ ಸೂತ್ರಗಳು ಬರೀ ಕಾಗದದ ಮೇಲಿರುವುದು ದುರದೃಷ್ಟಕರ. ಲಂಗೂ ಲಗಾಮಿಲ್ಲದ ಕೈಗಾರಿಕೆ ಘಟಕಗಳು ಇಂದು ಬೆಂಗಳೂರು, ಮಂಗಳೂರು, ಬೀದರ್, ಮೈಸೂರು ನಗರಗಳನ್ನು ಆವರಿಸಿಕೊಂಡಿದೆ. ಈ ನಗರಗಳ ಆಸುಪಾಸಿನಲ್ಲಿಯೇ ತಲೆ ಎತ್ತಿದ ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯವಿಂದು ಜಲ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.
ಹಸಿರು ನ್ಯಾಯಮಂಡಳಿ ಮತ್ತು ಲೋಕಾಯುಕ್ತ ಪ್ರತ್ಯೇಕವಾಗಿ ಇಂತಹ ಪ್ರಕರಣಗಳನ್ನು ಗಮನಿಸಿ ಸುಮೋಟೋ ತನಿಖೆ ನಡಸಿದರೂ. ಸರ್ಕಾರ ಈ ಗಂಭೀರ ವರದಿಗಳನ್ನು ಗಮನಿಸಿ ಸೂಕ್ತ ಕ್ರಮ ಜರುಗಿಸದಿರುವುದು ನಿಜಕ್ಕೂ ಖೇದಕರ. ಇನ್ನು ನಗರ ಮತ್ತು ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಹಾವಳಿ ವಿಪರೀತವಾಗಿದೆ. ಪ್ರತಿಯಂದು ಮನೆ ಮತ್ತು ಹೋಟೆಲ್ ಮತ್ತು ಕಚೇರಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಬೇರ್ಪಡಿಸಿ ಪಾಲಿಕೆ ಸಿಬ್ಬಂದಿಗೆ ನೀಡಲು ಜನತೆ ಕೂಡಾ ಪರಮ ಆಲಸ್ಯತನ ತೋರುವುದು ವಿಷಾದಕರ.
ಬೆಂಗಳೂರಿನಂತಹ ಮಹಾನಗರಲ್ಲಿ ಸಂಗ್ರಹವಾಗುವ ಒಣಕಸವು ಸಮರ್ಪಕವಾಗಿ ಸಂಸ್ಕರಣೆಗೆ ಒಳಪಟ್ಟರೆ ವಿದ್ಯುತ್ ತಯಾರಿಸಲು ಸಾಧ್ಯವಾಗುವುದು . ಹಾಗೆಯೆ ಹಸಿ ಕಸ ಮತ್ತು ಇ ತ್ಯಾಜ್ಯದ ವಿಲೇವಾರಿ ಬಗ್ಗೆ ಐಐಟಿ ಮತ್ತು ಟಾಟಾ ಸಂಶೋಧನೆ ಸಂಸ್ಥೆ ನೂತನ ಆವಿಷ್ಕಾರಗಳ ಬಗ್ಗೆ ಇಂದು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.


