ವಿದೇಶಿ ಭಯೋತ್ಪಾದಕನ ಜೊತೆ ನಿರಂತರ ಸಂಪರ್ಕ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವಂಥ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಂಕೆಯಿಂದ ತುಮಕೂರಿನ ಯುವಕನೊಬ್ಬನನ್ನು ಕ್ಯಾತಸಂದ್ರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ತುಮಕೂರು ನಗರ ಪೊಲೀಸರು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತ ದೇಶದ ಆಂತರಿಕ ಬೆಳವಣಿಗೆಗಳ ಕುರಿತು ಮಾಹಿತಿ ರವಾನಿಸುತ್ತಿದ್ದ ಎನ್ನಲಾಗಿದೆ.
ಬಂಧಿತ ಅಲ್ಲಾಬಕ್ಷು (24) ತುಮಕೂರಿನ ಶ್ರೀರಾಮನಗರ ನಿವಾಸಿಯಾಗಿದ್ದು, ಎಕ್ಸ್ ಖಾತೆ ಮೂಲಕ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. 20 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಶಂಕಿತ ಉಗ್ರನೊಬ್ಬ ಪರಿಚಯವಾಗಿದ್ದ. ಇನ್ಸ್ಟಾಗ್ರಾಮ್ನಲ್ಲಿ ಶಂಕಿತ ಮಾಡುತ್ತಿದ್ದ ಪೋಸ್ಟ್ಗೆ ಈತ ಲೈಕ್ ಮಾಡುವುದರ ಜೊತೆಗೆ ಮೆಸೇಜ್ ಮಾಡುತ್ತಿದ್ದ. ನಂತರ ಸಂಪರ್ಕ ಎಕ್ಸ್ನಲ್ಲಿ ಮುಂದುವರಿದಿದ್ದು, ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಅಲ್ಲಾಬಕ್ಷು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿದ್ದ ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ದೇಶ ವಿರೋಧಿ ಚಾಟಿಂಗ್ಗಳ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ವಹಿಸಿದ್ದವು. ಆತನ ಲಿಂಕ್ಗಳನ್ನು ಪತ್ತೆಹಚ್ಚಿದ ಬಳಿಕ, ತನಿಖಾ ಸಂಸ್ಥೆಗಳು ರಾಜ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ಗುರುವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಯುವಕನಿಗೆ ಸಾಥ್ ನೀಡಿದ ಹಾಗೂ ನಿಕಟ ಸಂಪರ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


