Menu

ಜೂನ್ 3ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಸಂಚಾರ

ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ನಡುವಿನ ರೈಲು ಹಳಿ ವಿದ್ಯುದೀಕರಣ ಪೂರ್ಣಗೊಂಡಿದ್ದು, ಜೂನ್‌ ಮೂರರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಕೇಂದ್ರ‌ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ‌ನೆರವೇರಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶೇ.99ರಷ್ಟು ವಿದ್ಯುದೀಕರಣ ಪೂರ್ಣಗೊಂಡಿದ್ದು, ಶೇ.1 ರಷ್ಟು ಬಾಕಿ ಇದೆ. ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯದ ವರೆಗೆ 55 ಕಿ.ಮೀ ವಿದ್ಯುದೀಕರಣ ಪೂರ್ಣಗೊಳಿಸಲಾಗಿದೆ ಎಂದರು.

ಜೂ‌ನ್ 3 ರಿಂದ ಪ್ರಾಯೋಗಿಕವಾಗಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದ್ದು, 15 ರಿಂದ 20 ದಿನದಲ್ಲಿ ಬೆಂಗಳೂರಿನಿಂದ‌ ಮಂಗಳೂರಿಗೆ, ಮಂಗಳೂರಿನಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾಗಿ ಮಾಹಿತಿ ನೀಡಿದರು.

10 ರಿಂದ 15 ದಿನದಲ್ಲಿ ಅರಸೀಕೆರೆಯಿಂದ ಬೆಂಗಳೂರಿಗೆ ಮೆಮೋ ರೈಲು ಸಂಚಾರ ಆರಂಭಿಸಲಿದ್ದೇವೆ. ಅರಸೀಕೆರೆಯಿಂದ ಬೆಂಗಳೂರಿಗೆ 35 ರು. ದರ‌ ನಿಗದಿ‌‌ಪಡಿಸಲಾಗಿದೆ ಎಂದರು. ಕೋವಿಡ್ ಅವಧಿಯಲ್ಲಿ ರಾಜ್ಯದಲ್ಲಿ ನಿಂತು ಹೋಗಿದ್ದ‌ 30 ರೈಲುಗಳನ್ನು ಪುನರ್ ಆರಂಭಿಸಲಾಗಿದೆ. ರಾಜ್ಯದ 61 ರೈಲ್ವೆ‌ ನಿಲ್ದಾಣ‌ಗಳಲ್ಲಿ ₹2 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. 31 ಹೊಸ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು‌‌ ತಿಳಿಸಿದರು.

ತುಮಕೂರು-ರಾಯದುರ್ಗ, ತುಮಕೂರು- ದಾವಣಗೆರೆ ಸೇರಿದಂತೆ ಹಲವು ಭಾಗಗಳಲ್ಲಿ ಬಾಕಿ ಉಳಿದಿದ್ದ 33-34ರ ಕೆಳಸೇತುವೆ ಹಾಗೂ ಮೇಲ್ಸೇತುವೆ ಕಾಮಗಾರಿಗಳನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿನಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಲೆವೆಲ್ ಕ್ರಾಸಿಂಗ್ (ಎಲ್‌ಸಿ) ಗೇಟ್‌ಗಳು ಇರಬಾರದು ಎಂದು ಪ್ರಧಾನಿ ಸೂಚಿಸಿದ್ದರು. ರಾಜ್ಯದಲ್ಲಿ ಈಗಾಗಲೇ 707 ಲೆವಲ್ ಕ್ರಾಸ್ ಗೇಟ್‌ಗಳನ್ನು ತೆರವುಗೊಳಿಸಿ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಿಸಲಾಗಿದೆ. 400 ಕ್ಕೂ ಹೆಚ್ಚು ಗೇಟ್‌ಗಳನ್ನು ಮುಂದಿನ 2 ವರ್ಷಗಳಲ್ಲಿ ಮುಕ್ತಾಯಗೊಳಿಸಲಾಗುವುದು ಎಂದರು.

Related Posts

Leave a Reply

Your email address will not be published. Required fields are marked *