ಕರ್ನಾಟಕ ಸರ್ಕಾರದ ಮೇಕೆದಾಟು ಯೋಜನೆಯ ಭೂಮಿ ಪೂಜೆಗೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ, ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಅಲ್ಲಿನ ಸಿಎಂ ವಿಜಯ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ಈ ಯೋಜನೆಯಿಂದ ಜೀವನೋಪಾಯಕ್ಕಾಗಿ ಕಾವೇರಿ ನದಿಯನ್ನೇ ನಂಬಿಕೊಂಡಿರುವ ತಮಿಳುನಾಡಿನ ಲಕ್ಷಾಂತರ ರೈತರಲ್ಲಿ ಆತಂಕ ಮೂಡಿಸಿದೆ ಎಂದು ವಿಜಯ್ ಪತ್ರದಲ್ಲಿ ವಿವರಿಸಿದ್ದಾರೆ. ತಮಿಳುನಾಡು ಒಪ್ಪಿಗೆಯನ್ನು ಪಡೆಯದೆ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕು ಎಂದು ವಿಜಯ್ ಪ್ರಧಾನಿಗೆ ಮನವಿ ಮಾಡಿದ್ದಾರೆ. ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ತಕ್ಷಣವೇ ತಿರಸ್ಕರಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮೂರು ದಶಕಗಳ ಸುದೀರ್ಘ ಕಾನೂನು ಹೋರಾಟದ ನಂತರ ಫೆಬ್ರವರಿ 16, 2018 ರಲ್ಲಿ ಸುಪ್ರೀಂಕೋರ್ಟ್ ಕಾವೇರಿ ನೀರಿನ ವಿವಾದಕ್ಕೆ ಅಂತಿಮ ತೀರ್ಪು ನೀಡಿದೆ. ಮೇಕೆದಾಟು ಯೋಜನೆಯು ಕಾವೇರಿ ಜಲ ವಿವಾದ ನ್ಯಾಯಮಂಡಳಿ ಅನುಮತಿಸಿದ ಯೋಜನೆಗಳ ಪಟ್ಟಿಯಲ್ಲಿಲ್ಲ. ಕರ್ನಾಟಕ ಭೂಮಿ ಪೂಜೆ ಘೋಷಿಸಿರುವುದು ಸುಪ್ರೀಂಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎಂದು ವಿಜಯ್ ತಿಳಿಸಿದ್ದಾರೆ.
ಕರ್ನಾಟಕ-ತಮಿಳುನಾಡು ಗಡಿಯ ಮೇಲ್ಭಾಗದಲ್ಲಿ 67.16 ಟಿಎಂಸಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯ ನಿರ್ಮಿಸುವ ಮೂಲಕ ತಮಿಳುನಾಡಿಗೆ ಹರಿಯಬೇಕಾದ ಅನಿಯಂತ್ರಿತ ಜಲಾನಯನ ಪ್ರದೇಶದ ನೀರನ್ನು ತಡೆಯಲು ಕರ್ನಾಟಕ ಪ್ರಯತ್ನಿಸುತ್ತಿದೆ. ಕೆಳಭಾಗದ ರಾಜ್ಯಕ್ಕೆ ಸಿಗುವ ನೀರಿನ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವನ್ನು ಮೇಲ್ಭಾಗದ ರಾಜ್ಯ ತೆಗೆದುಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದಬುದಾಗಿ ವಿವರಿಸಿದ್ದಾರೆ.
ತಮಿಳುನಾಡು ಸರ್ಕಾರದ ಮನವಿಯನ್ನು ಪರಿಗಣಿಸದೆ ಕೇಂದ್ರ ಜಲ ಆಯೋಗ ಮೇಕೆದಾಟು ಯೋಜನೆಯ ಪ್ರಸ್ತಾವನೆಯನ್ನು ಸಮ್ಮತಿಸುತ್ತಿರುವುದು ಆಶ್ಚರ್ಯ ತಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪ್ರಚಾರಕ್ಕಾಗಿ ಅಥವಾ ರಾಜಕೀಯ ಗಿಮಿಕ್ಗಾಗಿ ಹೋಗಿ ಮೇಕೆದಾಟು ಜಾಗದಲ್ಲಿ ಗುದ್ದಲಿ ಪೂಜೆ ಮಾಡುವುದಿಲ್ಲ. ಯೋಜನೆ ಮರುಪರಿಶೀಲಿಸಿ ಹೊಸ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು ಕೇಂದ್ರಕ್ಕೆ ಕಳಹಿಸಲಾಗುವುದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಪರಿಸರ ಇಲಾಖೆಯಿಂದ ಅಂತಿಮ ಕ್ಲಿಯರೆನ್ಸ್ ಸಿಕ್ಕ ಬಳಿಕ ವಿಳಂಬವಿಲ್ಲದೆ ಅಧಿಕೃತವಾಗಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸುವುದಾಗಿ ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು.


