ಚುನಾವಣೆ ಸಂದರ್ಭದಲ್ಲಿ ಮಕ್ಕಳ ಬಳಕೆ, ಭ್ರಷ್ಟಾಚಾರ ಆರೋಪಗಳಡಿ ಟಿವಿಕೆ ಸ್ಥಾಪಕ, ತಮಿಳುನಾಡು ಸಿಎಂ ವಿಜಯ್ ಮತ್ತಿತರರಿಗೆ ನೋಟಿಸ್ ನೀಡಲು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭ ಮತದಾರರ ಮೇಲೆ ಪ್ರಭಾವ ಬೀರಲು ಮಕ್ಕಳ ಬಳಕೆ ಸೇರಿದಂತೆ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಅನ್ವಯ ಹೈಕೋರ್ಟ್ ಈ ಆದೇಶ ನೀಡಿದೆ.
ಕಡಲೂರು ಜಿಲ್ಲೆಯ ವಕೀಲ ಎಲ್ ವಾಸುಕಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ ಆರ್ ಸ್ವಾಮಿನಾಥನ್ ಮತ್ತು ವಿ ಲಕ್ಷ್ಮಿನಾರಾಯಣನ್ ಅವರನ್ನೊಳಗೊಂಡ ರಜಾ ಪೀಠ, ಭಾರತದ ಚುನಾವಣಾ ಆಯೋಗ, ತಮಿಳುನಾಡು ಮುಖ್ಯ ಚುನಾವಣಾಧಿಕಾರಿ, ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆಯನ್ನು ಮೇ 29 ಕ್ಕೆ ಮುಂದೂಡಿದೆ.
ಏಪ್ರಿಲ್ 21, 2026 ರಂದು ಚೆನ್ನೈನ ವೈಎಂಸಿಎ ಮೈದಾನದಲ್ಲಿ ನಡೆದ ಚುನಾವಣಾ ಪ್ರಚಾರ ವೇಳೆ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಪೋಷಕರನ್ನು ಮಕ್ಕಳು ಮನವೊಲಿಸಬೇಕು ಎಂದು ಟಿವಿಕೆ ಸಂಸ್ಥಾಪಕ ವಿಜಯ್ ಭಾಷಣ ಮಾಡಿದ್ದರು ಎಂದು ವಾಸುಕಿ ಆರೋಪಿಸಿದ್ದಾರೆ. ಅಪ್ರಾಪ್ತ ವಯಸ್ಕ ಮಕ್ಕಳನ್ನು ಚುನಾವಣಾ ಪ್ರಭಾವದ ಸಾಧನಗಳಾಗಿ ಬಳಸುವ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಿತು ಎಂದು ಹೇಳಿದ್ದಾರೆ.
ವಿಜಯ್ ಭಾಷಣದ ನಂತರ ಮತದಾನ ಮಾಡುವ ಬಗ್ಗೆ ಮಕ್ಕಳು ಪೋಷಕರ ಮೇಲೆ ಭಾವನಾತ್ಮಕವಾಗಿ ಒತ್ತಡ ಹೇರುತ್ತಿರುವುದನ್ನು ತೋರಿಸುವ ವೀಡಿಯೊ, ಫೋಟೋಗಳು ವೈರಲ್ ಆಗಿದ್ದವು. ಇಸಿಐ ಮತ್ತು ಸಿಇಒ ತಕ್ಷಣ ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಿದ್ದರು. 2026 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ತಮಿಳುನಾಡಿನ ಹಲವು ಕ್ಷೇತ್ರಗಳಲ್ಲಿ ವೋಟಿಗಾಗಿ ನೋಟು ಹಂಚಿಕೆಗೆ ಸಂಬಂಧಿಸಿದಂತೆ ಆರೋಪಗಳಿವೆ ಎಂದು ಹೇಳಿದ್ದಾರೆ.


