ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಮಳೆಗೆ ಮಣ್ಣಿನ ಮನೆಯ ಮೇಲ್ಚಾವಣಿ ಕುಸಿದು 55 ವರ್ಷದ ಮಹಿಳೆ ಮಹಾದೇವಿ ಜೀವಂತ ಸಮಾಧಿಯಾಗಿದ್ದಾರೆ. ಮೃತರ ಪತಿ ಶಿವಾನಂದ ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದಾರೆ.
ಗೌರೀಶ್ವರ ದೇವಸ್ಥಾನ ಸಮೀಪವಿರುವ ಮಹಾದೇವಿ ಅವರ ಹಳೆಯ ಮಣ್ಣಿನ ಮನೆ ಮಳೆಗೆ ದುರ್ಬಲಗೊಂಡಿತ್ತು. ಮನೆಯಲ್ಲಿ ದಂಪತಿ ಮಲಗಿದ್ದಾಗ ನಸುಕಿನ ಜಾವ ಮೇಲ್ಚಾವಣಿ ಕುಸಿದು ಮಹಾದೇವಿ ಮಣ್ಣಿನ ರಾಶಿಯಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ.
ಪತಿ ಶಿವಾನಂದ ಮನೆಯ ಹೊರಭಾಗದಲ್ಲಿ ಮಲಗಿದ್ದರು. ಕೇಳಿಬಂದರ ಸದ್ದಿಗೆ ಓಡಿಬಂದಾಗ ಮನೆ ಸಂಪೂರ್ಣ ಕುಸಿದು ಮಣ್ಣಿನ ರಾಶಿಯಾಗಿತ್ತು. ಸ್ಥಳೀಯರು ತಕ್ಷಣ ಮಣ್ಣು ತೆಗೆದು ಮಹಾದೇವಿ ಅವರನ್ನು ಹೊರತೆಗೆದಾಗ ಅವರು ಅಸು ನೀಗಿದ್ದರು.
ನಿಡಗುಂದಿ ಪೊಲೀಸ್ ಠಾಣೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಮನೆ ಕುಸಿದು ನಾಲ್ವರ ಸಾವು
ಕಳೆದ ವಾರ ವಿಜಯಪುರದ ಆಲಮೇಲ ತಾಲೂಕಿನ ಮೋರಟಗಿಯಲ್ಲಿ ಸುರಿದ ಅಕಾಲಿಕ ಮಳೆಗೆ ಮನೆ ಕುಸಿದು ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಈ ಕುಟುಂಬ ಬೆಳಗ್ಗೆದ್ದು ಖಾಲಿ ಮಾಡಿ ಬೇರೆ ಮನೆಗೆ ಹೋಗುವುದಾಗಿ ನಿರ್ಧರಿಸಿ ಊಟ ಮಾಡಿ ಮಲಗಿದ್ದರು. ಬೆಳಿಗ್ಗೆ ಏಳುವುದರೊಳಗೆ ಜೀವಂತ ಸಮಾಧಿಯಾಗಿದ್ದರು.
ಗ್ರಾಮದ ಗುರುನಾಥ ಬಡಿಗೇರ್ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13), ಕೀರ್ತಿ ಬಡಿಗೇರ (9) ಮೃತಪಟ್ಟವರು. ಗುರುನಾಥ್ ಬಡಿಗೇರ್ ಹೊಸ ಮನೆ ಕಟ್ಟಿಸುತ್ತಿದ್ದರು. ಕಳೆದೆರಡು ವರ್ಷಗಳಿಂದ ಗ್ರಾಮದ ಹಳೆಯ ಮನೆಯಲ್ಲಿ ಬಾಡಿಗೆಗಿದ್ದರು. ಮನೆ ಶಿಥಿಲಾವಸ್ಥೆ ತಲುಪಿದ್ದ ಕಾರಣ ಮನೆ ಬಿಟ್ಟು ಬೇರೆ ಮನೆಗೆ ಹೋಗುವ ಸಿದ್ಧತೆಯಲ್ಲಿ ಎಲ್ಲ ವಸ್ತುಗಳನ್ನೂ ಪ್ಯಾಕ್ ಮಾಡಿದ್ದರು. ರಾತ್ರಿ ಗಾಳಿಸಹಿತ ಮಳೆ ಸುರಿದು ಮೇಲ್ಛಾವಣಿ ಕುಸಿದು ಅಸು ನೀಗಿದ್ದರು.


