ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಒಕ್ಕೂಟಗಳು ಸಿದ್ಧತೆ ನಡೆಸುತ್ತಿರುವಂತೆಯೇ ಕೆಎಸ್ಸಾರ್ಟಿಸಿ ಕೆಲಸವಿಲ್ಲದಿದ್ದರೆ ವೇತನವಿಲ್ಲ ಎಂಬ ನಿಯಮವನ್ನು ತಕ್ಷಣದಿಂದ ಜಾರಿಗೊಳಿಸಿ ಆದೇಶ ಹೊರಡಿಸುವ ಮೂಲಕ ನೌಕರರಿಗೆ ಬಿಸಿ ಮುಟ್ಟಿಸಿದೆ.
ಸಾರಿಗೆ ನೌಕರರ ಸಂಘಟನೆಗಳು ವೇತನ ಪರಿಷ್ಕರಣೆ, ಸೇವಾ ಶರತ್ತುಗಳ ಸುಧಾರಣೆ ಸೇರಿದಂತೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಸಜ್ಜಾಗಿವೆ. ಕೆಎಸ್ಸಾರ್ಟಿಸಿ ಆಡಳಿತ ಮಂಡಳಿ ಸಾರ್ವಜನಿಕ ಸಾರಿಗೆ ಸೇವೆಗೆ ತೊಂದರೆಯಾಗಬಾರದೆಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿ, ಮುಷ್ಕರದಲ್ಲಿ ಭಾಗವಹಿಸುವ ನೌಕರರನ್ನು ಕರ್ತವ್ಯದಿಂದ ಗೈರುಹಾಜರಾದವರಾಗಿ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿ, ಇಂತಹ ನೌಕರರಿಗೆ ಆ ದಿನದ ವೇತನ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ತಾತ್ಕಾಲಿಕ ಅಮಾನತು, ತನಿಖೆ ಹಾಗೂ ಇತರ ಆಡಳಿತಾತ್ಮಕ ಕ್ರಮಗಳು ಸೇರಿದಂತೆ ಸಾರ್ವಜನಿಕ ಸೇವೆಗೆ ಅಡ್ಡಿಪಡಿಸುವ ಅಥವಾ ನಿಯಮಗಳನ್ನು ಉಲ್ಲಂಘಿಸಿ ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ ಇಲಾಖಾ ಮಟ್ಟದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮುಷ್ಕರ ಅವಧಿಯಲ್ಲಿ ಯಾವುದೇ ಮುಂಗಡ ರಜೆಗಳನ್ನು ಮಂಜೂರು ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ರಜೆ ಪಡೆದಿರುವ ನೌಕರರ ರಜೆಯನ್ನು ಅತ್ಯಗತ್ಯ ಸಂದರ್ಭ ಹೊರತುಪಡಿಸಿ ರದ್ದುಪಡಿಸುವ ಅಧಿಕಾರವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾಗಿದೆ. ಸಾರಿಗೆ ಸೇವೆ ಸಂಪೂರ್ಣವಾಗಿ ಸ್ಥಗಿತವಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್ ಸೇವೆ ನಿರಂತರವಾಗಿ ಮುಂದುವರಿಯುವಂತೆ ಸೂಕ್ತ ಯೋಜನೆ ರೂಪಿಸಲಾಗಿದೆ. ವಿಭಾಗೀಯ ಅಧಿಕಾರಿಗಳಿಗೆ ಅಗತ್ಯ ಸಿಬ್ಬಂದಿ ನಿಯೋಜನೆ, ತುರ್ತು ಬಸ್ ಸಂಚಾರ ವ್ಯವಸ್ಥೆ ಹಾಗೂ ಹೆಚ್ಚುವರಿ ಡ್ಯೂಟಿ ಶಿಫ್ಟ್‌ಗಳ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ.


