Menu

ತೈಲ ಸಂಕಷ್ಟ: ಜನತೆಗೆ ಕೇಂದ್ರ ನೆರವಾಗಲಿ

ತೈಲ ಸಂಕಷ್ಟದ ಈ ವೇಳೆಯಲ್ಲಿ ಯಾವ ರಾಜ್ಯದ ಸಾಮಾನ್ಯನಿಗೂ ಹೊರೆಯಾಗದ ರೀತಿಯಲ್ಲಿ ಒಂದಷ್ಟು ಪರಿಹಾರದ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಘೋಷಿಸುವುದು ಅನಿವಾರ್ಯ. ಈ ದಿಶೆಯಲ್ಲಿ ಜನತೆ ತ್ಯಾಗ ಮಾಡುವುದರಲ್ಲಿ ಅನುಮಾನವಿಲ್ಲ. ಆದರೆ ಈ ತ್ಯಾಗವು ಮಂತ್ರಿ, ಮಹೋದಯರು, ಅಧಿಕಾರಿಗಳು, ಮತ್ತು ಸಮಾಜದ ಅತಿ ಗಣ್ಯರು ಕೂಡಾ ಕಟ್ಟುನಿಟ್ಟಾಗಿ ಪಾಲಿಸಬೇಕಲ್ಲವೇ.

ಪಂಚರಾಜ್ಯಗಳ ಚುನಾವಣೆ ಮುಗಿದ ಬೆನ್ನ ಹಿಂದೆಯೇ, ಕೇಂದ್ರ ಸರ್ಕಾರವೀಗ ಡೀಸೆಲ್, ಪೆಟ್ರೋಲ್ ದರ ಏರಿಸಿದೆ. ಇದು ಸಾಮಾನ್ಯ ಜನತೆಯ ಮೇಲೆ ಅಡ್ಡ ಪರಿಣಾಮ ಬೀರುವುದಂತೂ ಖಂಡಿತ. ಮಧ್ಯ ಪ್ರಾಚ್ಯದ ಯುದ್ಧದಿಂದಾಗಿ, ದೇಶದಲ್ಲಿ ಇಂಧನ ಬಳಕೆದಾರರ ಎಲ್ಲರ ಮೇಲೆ ದರ ಏರಿಕೆ ಪರಿಣಾಮ ಉಂಟು ಮಾಡಿದೆ. ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ತುಸು ಪ್ರಾಮಾಣಿಕವಾಗಬೇಕಿತ್ತು .

ಕಳೆದ ಮೂರು ತಿಂಗಳಿನಿಂದಲೂ ಯುದ್ಧ ಸಂಭವಿಸಿದ್ದು, ಇದರ ಸಾಧಕ-ಭಾದಕ ಕುರಿತು ಸರ್ಕಾರ ದೇಶದ ಜನತೆಗೆ ಮತ್ತಷ್ಟು ವಿವರಗಳನ್ನು ನೀಡಬೇಕಿತ್ತು. ಇಲ್ಲಿಯವರೆಗೆ ದೇಶದ ಜನತೆಗೆ ಯುದ್ಧದ ಘೋರ ಪರಿಣಾಮಗಳು ಸಾಮಾನ್ಯನ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವುದಿಲ್ಲ ಎಂದ ಸರ್ಕಾರ ಈಗ ದಿಢೀರ್ ಆಗಿ ಇಂಧನ ಬೆಲೆ ಹೆಚ್ಚಿಸಿದರೆ ಇದು ದೇಶದ ಎಲ್ಲ ಜನತೆಯ ಮೇಲೆ ಪರಿಣಾಮ ಬೀರುವುದು ಸಹಜ.

ಪೆಟ್ರೋಲ್ ಮತ್ತು ಡೀಸೆಲಿನ ಪ್ರತಿ ಲೀಟರ್ ಮೇಲೆ ಮೂರು ರೂಪಾಯಿ ಹೆಚ್ಚಾಗುವುದರಿಂದ ಇದು ಸಮೂಹ ಸಾರಿಗೆ , ಅಗತ್ಯ ವಸ್ತುಗಳು, ಸರಕು ಸಾಗಣೆ ಹಾಲು, ಹಣ್ಣು ಮತ್ತು ತರಕಾರಿ ಬೆಲೆ ಮಾರುಕಟ್ಟೆಯಲ್ಲಿ ಅತಿ ದುಬಾರಿಯಾಗುವುದು ವಾಸ್ತವ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ ಹೆಚ್ಚಾಗಿದೆ. ಇದರಿಂದ ಹೋಟೆಲ್‌ಗಳ ತಿಂಡಿ ಬೆಲೆ ಈಗಾಗಲೇ ಅಧಿಕಗೊಂಡಿದೆ. ಸಾಮಾನ್ಯನು ಇದರ ಹೊಡೆತದಿಂದ ನಲುಗಿರುವ ಬೆನ್ನಹಿಂದೆಯೇ ಈಗ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನೂ ಹೆಚ್ಚಿಸಿರುವುದು ಸಹಜವಾಗಿ ಜನತೆಯಲ್ಲಿ ತಲ್ಲಣ ಮೂಡಿಸುವುದು ಸಹಜ. ಕೇಂದ್ರ ಸರ್ಕಾರವು ಇಂತಹ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ ಸರ್ವ ಪಕ್ಷಗಳ ಜೊತೆ ಮುಕ್ತವಾಗಿ ಚರ್ಚಿಸಬೇಕಿತ್ತು. ಏಕೆಂದರೆ ಯುದ್ಧದ ವಾತಾವರಣದಿಂದ ಇಡೀ ಜಾಗತಿಕ ರಾಷ್ಟ್ರಗಳು ಸಂಪೂರ್ಣವಾಗಿ ಪಾರಾಗಲು ಭಾರತದ ಪರೋಕ್ಷ ಪಾತ್ರವೂ ಇದೆ. ಇಂಧನ ಬೆಲೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸೌಹಾರ್ದಯುತ ಸಂಬಂಧಗಳು ಇರಬೇಕು. ಇಂತಹ ಸಮಯದಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಸಾಕಷ್ಟು ನೆರವು ಕೂಡಾ ಅಗತ್ಯ ದುರದೃಷ್ಟಶಾತ್ ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಈ ದಿಸೆಯಲ್ಲಿ ಕೇಂದ್ರದಿಂದ ಕಡ್ಡಾಯವಾಗಿ ಲಭ್ಯವಿರುವ ಅನುದಾನ ಮತ್ತು ಹಣಕಾಸಿನ ನೆರಗೂ ಅಂಗಲಾಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತೈಲ ಮಿತ ಬಳಕೆ ಮತ್ತು ಸಿಂಗಲ್ ವೆಹಿಕಲ್ ಬಳಕೆಯ ವಿಚಾರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಲಹೆಯೇನೋ ಸರಿ. ಆದರೆ ತೈಲ ಸಂಕಷ್ಟದ ವೇಳೆ ಯಾವ ರಾಜ್ಯದ ಸಾಮಾನ್ಯನಿಗೂ ಹೊರೆಯಾಗದ ರೀತಿಯಲ್ಲಿ ಒಂದಷ್ಟು ಪರಿಹಾರದ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಘೋಷಿಸುವುದು ಅನಿವಾರ್ಯ. ದೇಶದ ಜನತೆ ಈ ದಿಶೆಯಲ್ಲಿ ತ್ಯಾಗ ಮಾಡುವುದರಲ್ಲಿ ಅನುಮಾನವಿಲ್ಲ. ಆದರೆ ಈ ತ್ಯಾಗವು ಮಂತ್ರಿ ಮಹೋದಯರು, ಅಧಿಕಾರಿಗಳು, ಮತ್ತು ಸಮಾಜದ ಅತಿ ಗಣ್ಯರು ಕೂಡಾ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಅಧಿಕಾರಿಗಳ ಅನಗತ್ಯ ವಾಹನ ಸಂಚಾರ ಮತ್ತು ಅನಗತ್ಯ ವಾಹನ ಓಡಾಟಗಳಿಂದ ತೈಲ ಖರ್ಚಾಗುವುದು ನಿಜ. ಈ ದಿಶೆಯಲ್ಲಿ ಸರ್ಕಾರವು ಪಕ್ಷ ಭೇದ ಮರೆತು ದೇಶದ ಹಿತವನ್ನು ಕಾಪಾಡುವಂತಹ ಕೆಲಸಕ್ಕೆ ಮುಂದಾಗಬೇಕು.

Related Posts

Leave a Reply

Your email address will not be published. Required fields are marked *