ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರಗಳು ವಾಣಿಜ್ಯ ಬಳಕೆದಾರರ ನೆರವಿಗೆ ಬರಬೇಕಿದೆ. ಹಾಗೆಯೇ ಈ ಬೆಲೆ ಏರಿಕೆಯು ದೇಶದ ಸಾಮಾನ್ಯನ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡದ ಹಾಗೆ ಎಚ್ಚರಿಕೆ ಕ್ರಮಗಳನ್ನು ವಹಿಸುವ ಗುರುತರ ಹೊಣೆಗಾರಿಕೆ ಕೂಡಾ ಇದೆ.
ವಾಣಿಜ್ಯ ಸಿಲಿಂಡರ್ ಬೆಲೆ ಈಗ ದಿಢೀರ್ ಏರಿಕೆಯಾಗಿದೆ. ಪಂಚ ರಾಜ್ಯಗಳ ಮತದಾನಕ್ಕೆ ತೆರೆ ಬಿದ್ದ ಕೆಲವೇ ತಾಸುಗಳ ಅಂತರದಲ್ಲಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿರುವುದು ಸಾರ್ವತ್ರಿಕ ವಲಯದಲ್ಲಿ ಇದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಮೂರು ಭಾರಿ ಅಡುಗೆ ಅನಿಲ ದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ಹೇಳಿಕೆಗಳೂ ಈಗ ಟೀಕೆ, ಟಿಪ್ಪಣಿಗಳಿಗೆ ಕಾರಣವಾಗಿದೆ.
ಮಧ್ಯಪ್ರಾಚ್ಯದಲ್ಲಿ ಇನ್ನೂ ಯುದ್ಧದ ಕಾರ್ಮೋಡ ಮರೆಯಾಗಿಲ್ಲ. ಇರಾನ್ ಮತ್ತು ಅಮೆರಿಕ ದೇಶಗಳ ನಡುವೆ ಕದನ ವಿರಾಮದ ಮಾತುಕತೆ ತಾರ್ಕಿಕ ಅಂತ್ಯ ವನ್ನೂ ಮುಟ್ಟಿಲ್ಲ. ಇಂತಹ ಸನ್ನಿವೇಶದಲ್ಲಿ ಸರ್ಕಾರವೀಗ ವಾಣಿಜ್ಯ ಬಳಕೆಯ ಅನಿಲದ ದರವನ್ನು ಹೆಚ್ಚಿಸದೆ ವಿಧಿಯಿಲ್ಲ ಎಂಬುದು ಕೇಂದ್ರ ಸರ್ಕಾರದ ಸಮಜಾಯಿಷಿ. ಆದರೆ ಒಂದೇ ಸಿಲಿಂಡರ್ ಒಂದರ ಮೇಲಿನ ದರವನ್ನು ರೂ. ೯೯೩ ಗೆ ಹೆಚ್ಚಿಸಿದರೆ ಇದು ಹೋಟೆಲ್ ಮತ್ತು ಬೀದಿ ಬದಿ ತಿಂಡಿ, ತಿನಿಸು ತಯಾರಕರು ಮತ್ತು ವ್ಯಾಪಾರಿಗಳ ಮೇಲೆ ನೇರವಾಗಿ ಅಡ್ಡ ಪರಿಣಾಮ ಬೀರುವುದು ಖಂಡಿತ. ಈಗಾಗಲೇ ಯುದ್ಧದ ಪರಿಣಾಮದಿಂದ ತಮ್ಮ ಎಂದಿನ ವ್ಯಾಪಾರವನ್ನು ಕಳೆದುಕೊಂಡಿರುವ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳೀಗ ಶುಕ್ರವಾರದಂದು ಕೇಂದ್ರ ಸರ್ಕಾರ ಕೈಗೊಂಡ ತೀರ್ಮಾನದಿಂದ ಅಘಾತಕ್ಕೆ ಒಳಗಾಗಿರುವುದು ನಿಜ.
ಬೆಲೆ ಹೆಚ್ಚಳ ಅನಿವಾರ್ಯ ಎಂಬುದೇನೋ ಸರಿ. ಆದರೆ ಒಮ್ಮೆಲೆಗೆ ಒಂದು ಸಿಲಿಂಡರ್ ಮೇಲಿನ ದರವನ್ನು ಅತಿ ದುಬಾರಿ ಪ್ರಮಾಣದಲ್ಲಿ ಹೆಚ್ಚಿಸಿದರೆ ಇದು ಸಮಾಜದ ಎಲ್ಲ ವರ್ಗದ ಮೇಲೆ ಪರಿಣಾಮ ಬೀರುವುದಿಲ್ಲವೇ ? ಹೋಟೆಲ್ ತಿಂಡಿ, ತಿನಿಸುಗಳ ಬೆಲೆ ಏರಿಕೆಗೆ ಇದು ಕಾರಣವಾಗುವುದಿಲ್ಲವೇ ? ಪರೋಕ್ಷವಾಗಿ ಇದರಿಂದ ದೇಶದ ಸಾಮಾನ್ಯ ಮತ್ತು ಮಧ್ಯಮ ಪ್ರಮಾಣದ ಜನತೆಗೆ ಇದರ ಬಿಸಿ ತಟ್ಟುವುದರಲ್ಲಿ ಅನುಮಾನವಿಲ್ಲ.
ಬೆಲೆ ಏರಿಕೆ ಮತ್ತು ಯುದ್ದ ಮುಂದುವರಿಕೆಗೆ ನೇರ ಸಂಬಂಧವಿದೆ ಎಂಬುದನ್ನು ಸರ್ಕಾರ ಮರೆಯವಂತಿಲ್ಲ. ಇದರಿಂದ ಭಾರತದಂತಹ ದೇಶದ ಮೇಲೆ ಆರ್ಥಿಕ , ಸಾಮಾಜಿಕವಾಗಿ ಅಡ್ಡ ಪರಿಣಾಮ ಬೀರುವುದು ಖಂಡಿತ. ಯುದ್ದವನ್ನು ನಿಲ್ಲಿಸುವ ಕಾರ್ಯದಲ್ಲಿ ಭಾರತದ ಸಕಾರಾತ್ಮಕ ಪ್ರಯತ್ನಗಳಾವುದೂ ಗೋಚರಿಸುತ್ತಿಲ್ಲ. ಶಾಂತಿ ಸಂಧಾನದ ಬಗ್ಗೆ ಚಕಾರ ಎತ್ತದ ಸರ್ಕಾರ ಯಾಕೆ ಇನ್ನೂ ಈ ವಿಚಾರದಲ್ಲಿ ಮುಂದಾಗುತ್ತಿಲ್ಲ ಎಂಬುದು ಗಂಭೀರ ವಿಷಯವಾಗಿದೆ. ಒಮ್ಮೆ ಹೆಚ್ಚಳವಾದ ಬೆಲೆಯನ್ನು ಸರ್ಕಾರ ಮತ್ತೆ ಕಡಿಮೆ ಮಾಡುವ ಉದಾಹರಣೆಗಳು ಅತಿ ಕಡಿಮೆ . ಆದರೆ ಇದರಿಂದ ಕೇವಲ ವಾಣಿಜ್ಯ ಬಳಕೆಯ ಗ್ರಾಹಕರು ಮಾತ್ರವಲ್ಲದೆ ಇದರ ಪರೋಕ್ಷ ಆರ್ಥಿಕ ಹೊರೆಯನ್ನು ದೇಶದ ಜನತೆಯ ಮೇಲೆ ಬೀಳುವುದರಲ್ಲಿ ಅನುಮಾನವಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರಗಳು ವಾಣಿಜ್ಯ ಬಳಕೆದಾರರ ನೆರವಿಗೆ ಬರಬೇಕಿದೆ. ಹಾಗೆಯೇ ಈ ಬೆಲೆ ಏರಿಕೆ ದೇಶದ ಸಾಮಾನ್ಯನ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡದ ಹಾಗೆ ಎಚ್ಚರಿಕೆ ಕ್ರಮಗಳನ್ನು ವಹಿಸುವ ಗುರುತರ ಹೊಣೆಗಾರಿಕೆ ಕೂಡಾ ಇದೆ.


