ವಿಮಾನದಲ್ಲಿ ಬಂದು ಬಿಎಸ್‌ಎನ್‌ಎಲ್ ನೌಕರರು ಧರಿಸುವ ಮಾದರಿಯ ನೀಲಿ ಬಣ್ಣದ ಸಮವಸ್ತ್ರ ಧರಿಸಿಕೊಂಡು ಬಿಎನ್ನೆಸ್ಸೆಲ್‌ನ ಲಕ್ಷಾಂತರ ರೂಪಾಯಿ ಮೌಲ್ಯದ ತಾಮ್ರದ ತಂತಿಗಳನ್ನು ಕಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶದ ಅಂತರಾಜ್ಯ ಕಳ್ಳರ ತಂಡವನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ನಿವಾಸಿಗಳಾದ ರವಿ ಚವ್ಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಬಂಧಿತರು. ಈ ಕಳ್ಳರು ಬೆಂಗಳೂರು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಇದೇ ರೀತಿ ಕಳ್ಳತನ ನಡೆಸುತ್ತಿರುವುದು ಪತ್ತೆಯಾಗಿದೆ.
ಸಾರ್ವಜನಿಕರಿಗೆ ಅನುಮಾನ ಬರದಂತೆ ಬಿಎಸ್‌ಎನ್‌ಎಲ್ ನೌಕರರು ಧರಿಸುವ ಮಾದರಿಯ ನೀಲಿ ಬಣ್ಣದ ಸಮವಸ್ತ್ರ ಧರಿಸಿಕೊಂಡು ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೇಂಜ್‌ಗಳು ಮತ್ತು ರಸ್ತೆ ಬದಿಯ ಫುಟ್‌ಪಾತ್‌ಗಳಲ್ಲಿರುವ ಇಂಟರ್ನೆಟ್ ಬಾಕ್ಸ್‌ಗಳ ಬಳಿ ರಿಪೇರಿ ಮಾಡುವ ನೆಪದಲ್ಲಿ ಹೋಗುತ್ತಿದ್ದರು. ಸಲಕರಣೆಗಳಿಂದ ಕಂಬಗಳನ್ನು ಒಡೆದು ಅದರೊಳಗಿನ ಬೆಲೆಬಾಳುವ ತಾಮ್ರದ ತಂತಿ ಮತ್ತು ಮಾಡ್ಯೂಲ್‌ಗಳನ್ನು ಹೊತ್ತೊಯ್ಯುತ್ತಿದ್ದರು.
ಕಳ್ಳತನಕ್ಕಾಗಿ ತಂಡ ವಿಮಾನದ ಮೂಲಕ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುತ್ತಿತ್ತು. ಬೆಂಗಳೂರಿಗೆ ಬಂದಿಳಿದು ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ ಮತ್ತು ಯಶವಂತಪುರದಲ್ಲಿ ಜುಲೈ 17 ಮತ್ತು 19ರಂದು ಸರಣಿ ಕಳ್ಳತನ ನಡೆಸಿದ್ದರು. ಕಳ್ಳತನ ಮಾಡಿದ ನಂತರ ಕದ್ದ ಮಾಲನ್ನು ರೈಲಿನ ಮೂಲಕ ಬೇರೆ ರಾಜ್ಯಗಳಿಗೆ ಸಾಗಿಸಿ ಪರಾರಿಯಾಗುತ್ತಿದ್ದರು.
ಬಿಎಸ್‌ಎನ್‌ಎಲ್ ಸಿಬ್ಬಂದಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.


