ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬಂದ ಮಾಹಿತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀಕ್ಷ್ಣ ಹೇಳಿಕೆ ನೀಡಿದೆ. ಶಬರಿಮಲೆ ಸೇರಿದಂತೆ ದೇಶದ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಾಲಯ ಈ ಅಭಿಪ್ರಾಯ ಮಂಡಿಸಿದೆ.
ಧಾರ್ಮಿಕ ಪಂಗಡದ ನಿರ್ದಿಷ್ಟ ಆಚರಣೆಯನ್ನು ಅಗತ್ಯ ಮತ್ತು ಅನಿವಾರ್ಯವಲ್ಲ ಎಂದು ಘೋಷಿಸಲು ಮಾನದಂಡಗಳನ್ನು ನಿರ್ಣಯಿಸುವುದು ನ್ಯಾಯಾಲಯಕ್ಕೆ ಅಸಾಧ್ಯವಲ್ಲ. ಆದರೆ ಕಷ್ಟಕರ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ `ದಾವೂದಿ ಬೊಹರಾ’ ಸಮುದಾಯಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿತು. `ದಾವೂದಿ ಬೊಹರಾ’ ಸಮುದಾಯದ ಪರವಾಗಿ ಹಾಜರಾದ ವಕೀಲ ನೀರಜ್ ಕಿಶನ್ ಕೌಲ್ ಅವರು, ‘ಧಾರ್ಮಿಕ ಪರಿಹಾರದ ವಿಷಯಗಳಲ್ಲಿ ನ್ಯಾಯಾಂಗ ನಿರ್ಬಂಧ’ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಬರೆದಿರುವ ಲೇಖನವೊಂದನ್ನು ಸಂವಿಧಾನ ಪೀಠದ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ‘ನಾವು ವಿಷಯ ತಜ್ಞರು, ನ್ಯಾಯ ಪರಿಣಿತರು ಮತ್ತು ಎಲ್ಲರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ಆದರೆ ವೈಯಕ್ತಿಕ ಅಭಿಪ್ರಾಯ, ಎಂದಿಗೂ ವೈಯಕ್ತಿಕ ಅಭಿಪ್ರಾಯ ಮಾತ್ರ ಆಗಿರಲಿದೆ ಎಂದರು.
ಜ್ಞಾನ ಯಾವುದೇ ಮೂಲ, ಯಾವುದೇ ದೇಶ, ಯಾವುದೇ ವಿಶ್ವವಿದ್ಯಾಲಯದಿಂದ ಬಂದರೂ ಸ್ವಾಗತಿಸಬೇಕು. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ವಕೀಲ ಕೌಲ್ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ , ʻವಾಟ್ಸಾಪ್ ವಿಶ್ವವಿದ್ಯಾಲಯದ ಮಾಹಿತಿ ಒಪ್ಪಲು ಆಗುವುದಿಲ್ಲ’ ಎಂದರು.


