ಚಿನ್ನ ಖರೀದಿಗೆ ಹೋಗಿದ್ದವರಿಂದ ಎಂಪಿ ಚಿನ್ನದ ಮಳಿಗೆಯ ಮಾಲೀಕ ಇಂದರ್ ಚಂದ್ ಮತ್ತು ಮಹಿಳೆಯೊಬ್ಬರು ಎರಡು ಕೋಟಿ ರೂ. ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ.
ಸರ್ಜಾಪುರದ ಪುನೀತ್ ಎಂಬಾತ ಚಿನ್ನ ಖರೀದಿ ಮಾಡಲು ಮುಂದಾಗಿದ್ದರು. ಪುನೀತ್ ಸಂಬಂದಿ ಸವಿತಾ ರೆಡ್ಡಿ ಹೆಚ್ಎಸ್ಆರ್ ಲೇಔಟ್ ನಲ್ಲಿರುವ ಎಂಪಿ ಚಿನ್ನದ ಮಳಿಗೆಯಲ್ಲಿ ಚಿನ್ನ ಕಡಿಮೆ ಬೆಲೆ ಹಾಗೂ ವೇಸ್ಟೆಜ್ ಚಾರ್ಜ್ ತುಂಬ ಕಡಿಮೆ ಇರುವುದಾಗಿ ನಂಬಿಸಿದ್ದಾಳೆ. ಸವಿತಾ ರೆಡ್ಡಿಯ ಮಾತು ನಂಬಿದ ಪುನೀತ್ ಎರಡು ಕೋಟಿ ನಗದು ಜೊತೆ ಎಂಪಿ ಚಿನ್ನದ ಮಳಿಗೆಗೆ ಹೋಗಿದ್ದಾರೆ. ಹಣವಿದ್ದ ಬ್ಯಾಗ್ಗಳನ್ನು ತೆಗೆದುಕೊಂಡು ಅರ್ಧ ಗಂಟೆ ಹೊರಗಡೆ ಇರಿ ಎಂದು ಒಳಗಡೆ ಹೋದ ಸಿಬ್ಬಂದಿ ಮರಳಿ ಬರಲಿಲ್ಲ.
ಸಿಬ್ಬಂದಿಯನ್ನು ಕೇಳಿದರೆ ಮಾಲೀಕರ ಜೊತೆ ಮಾತನಾಡಿ ಎಂದು ಪುನೀತ್ ಕುಟುಂಬಸ್ಥರನ್ನು ದಬಾಯಿಸಿ ಕಳಿಸಿದ್ದಾರೆ. ಮಾಲೀಕನಿಗೆ ಫೋನ್ ಮಾಡಿದೆ ಸವಿತಾ ರೆಡ್ಡಿಗೆ ಮಾತನಾಡಿದ್ದು, ಅಲ್ಲೇ ಮಾತನಾಡಿಕೊಳ್ಳಿ ಎಂದು ಉಡಾಫೆ ಉತ್ತರ ಕೊಟ್ಟಿದ್ದಾನೆ. ಎರಡು ಕೋಟಿ ನಗದು ಕೊಟ್ಟು ಕೆಟ್ಟಿದ್ದ ಪುನೀತ್ ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ. ಪೊಲೀಸರು ಅವರ ಜೊತೆಯಲ್ಲಿ ಶಾಮೀಲು ಆಗಿದ್ದಾರೆಂದು ಹಣ ಕಳೆದುಕೊಂಡ ಪುನೀತ್ ಆರೋಪಿಸಿದ್ದಾರೆ. ನಗದು ಕೊಟ್ಟಿರುವುದರಿಂದ ಆರೋಪಿಗಳು ಕಾನೂನು ಕ್ರಮದಿಂದ ಪಾರಾಗುವುದು ಸುಲಭವಾಗಿದೆ.


