Menu

ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು

ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿ ಕೂಡ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನಡೆದಿದೆ.

ತಾಯಿಯ ಮೃತದೇಹ ಪತ್ತೆಯಾಗಿದ್ದು, ಮಗನ ಮೃತದೇಹಕ್ಕಾಗಿ ಶೋಧ ಮುಂದುವರಿಸಲಾಗಿದೆ.27 ವರ್ಷದ ಲಕ್ಷ್ಮಿ ಕುಠೋಳಿ ಹಾಗೂ 10 ವರ್ಷದ ಸುಪ್ರೀತ್ ಕುಠೋಳಿ ಮೃತಪಟ್ಟವರು.

ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ನದಿಯಲ್ಲಿ ಈ ದುರಂತ ನಡೆದಿದೆ. ಮಗ ಸುಪ್ರೀತ್ ನದಿಯಲ್ಲಿ ಇಳಿದಾಗ ಮುಳುಗಲಾರಂಭಿಸಿದ್ದು, ಮಗನನ್ನ ರಕ್ಷಣೆ ಮಾಡಲು ಹೋಗಿ ತಾಯಿಯೂ ಪ್ರಾಣ ಕಳೆದುಕೊಂಡಿದ್ದಾರೆ.

ಮೈಸೂರಿನ ಕೆ.ಆರ್‌.ನಗರ ತಾಲೂಕಿನ ಎಡತೊರೆ ಅರ್ಕೇಶ್ವರ ಸ್ವಾಮಿ ದೇಗುಲ ಸಮೀಪದ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಭಾನುವಾರ ಮುಳುಗಿ ಮೃತಪಟ್ಟಿದ್ದರು. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಬನ್ನೂರಿನ ಜುಬೇದಾ (40), ಬೆಂಗಳೂರಿನ ಸಲ್ಮಾ (45) ಪ್ರಾಣಾಪಾಯದಿಂದ ಪಾರಾಗಿದ್ದರು.

ಕೃಷ್ಣರಾಜನಗರ ಸಮೀಪದ ಹಜರತ್‌ ಖಾದರ್‌ ಲಿಂಗವಲ್ಲಿ ಉರುಸ್‌ ವೀಕ್ಷಿಸಲು ಆಗಮಿಸಿದ್ದ 12 ಸಂಬಂಧಿಕರುದೇವಸ್ಥಾನದ ಬಳಿಯ ನದಿಯಲ್ಲಿ ಈಜಲು ತೆರಳಿದ್ದಾರೆ. ಈಜು ಬಾರದ ಐವರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಎಲ್ಲರೂ ಕೂಗಿಕೊಂಡಾಗ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ.

ಚಿಂತಾಮಣಿ ತಾಲೂಕಿನ ಗುನ್ನಹಳ್ಳಿಯ ಕೃಷಿ ಹೊಂಡದಲ್ಲಿ ಈಜಾಡುವಾಗ ಭಾನುವಾರ ವ್ಯಕ್ತಿಯೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಾಲೂಕಿನ ಕೈವಾರ ಹೋಬಳಿ ಮೈಲಾಪುರದ ಜಾಲೇಗೌಡ(40) ಮೃತರು..
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾಲೇಗೌಡ ಕೃಷಿ ಹೊಂಡದಲ್ಲಿ ಈಜಾಡುತ್ತಿದ್ದರು, ಮುಳುಗಿದ ತಂದೆ ಮೇಲಕ್ಕೆ ಏಳದಿರುವಾಗ ದಡದಲ್ಲಿದ್ದ ಮಕ್ಕಳು ಕೂಗಿಕೊಂಡಿದ್ದಾರೆ. ಪಕ್ಕದ ತೋಟದಲ್ಲಿದ್ದ ರೈತರು ನೀರಿನಿಂದ ಜಾಲೇಗೌಡ ಅವರನ್ನು ಮೇಲಕ್ಕೆ ಎತ್ತಿದ್ದು, ಅಷ್ಟರಲ್ಲಿ ಮೃತಪಟ್ಟಿದ್ದರು.

Related Posts

Leave a Reply

Your email address will not be published. Required fields are marked *