Menu

ವಿನಯ್‌ ಕುಲಕರ್ಣಿ ಕೇಸ್‌: ರಾಜಕೀಯದಿಂದಾಗುವ ಕೊಲೆ ಪ್ರಕರಣಗಳಿಗೆ ತಿಲಾಂಜಲಿ ನೀಡಿದ ತೀರ್ಪು ಎಂದ ಆರ್‌ ಅಶೋಕ

ಮಾಜಿ ಸಚಿವ ವಿನಯ್‌ ಕುಲಕರ್ಣಿ ಮಾಡಿಸಿದ ಕೊಲೆ ಪ್ರಕರಣದಲ್ಲಿ, ಇಬ್ಬರು ಸಾಕ್ಷಿ ಹೇಳಿದ್ದಾರೆ. ರಾಜಕಾರಣಿಗಳ ಮಾತು ಕೇಳಿಕೊಂಡು ಕೊಲೆ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಸಿಬಿಐ ತನಿಖೆ ನಡೆಯದೇ ಇದ್ದಿದ್ದರೆ ಪೊಲೀಸ್‌ ಇಲಾಖೆ ಕೇಸನ್ನು ಮುಚ್ಚಿಹಾಕುತ್ತಿತ್ತು. ಈಗ ಎಲ್ಲವೂ ಸಾಬೀತಾಗಿದ್ದು, ತಪ್ಪಿತಸ್ಥರು ಯಾರೆಂದು ಗೊತ್ತಾಗಿದೆ. ವಿನಯ್‌ ಕುಲಕರ್ಣಿಯೇ ಕೊಲೆ ಮಾಡಿಸಿದ್ದು ಎಂದು ಕೋರ್ಟ್‌ ತೀರ್ಪು ನೀಡಿದೆ. ರಾಜಕೀಯ ಕ್ಷೇತ್ರದಲ್ಲಾಗುವ ಕೊಲೆಗಳಿಗೆ ಇದು ತಿಲಾಂಜಲಿ ನೀಡಲಿದೆ. ಇದು ಸ್ವಾಗತಾರ್ಹ ತೀರ್ಪು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದ್ದಾರೆ.

ಮಾಧ್ನಾಯಮದವರೊಂದಿಗೆ ಮಾತನಾಡಿದ ಅವರು, ನಾರಿ ಶಕ್ತಿ ವಂದನಾ ಅಧಿನಿಯಮ ಹಾಗೂ ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಈ ಹಿಂದೆ ಮಸೂದೆಯನ್ನು ಸ್ವಾಗತ ಮಾಡುತ್ತೇವೆಂದು ಹೇಳಿ ಈಗ ಕಿತಾಪತಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರೀಗ ಧರ್ಮಾಧಾರಿತ ಮೀಸಲು ನೀಡಬೇಕೆಂದು ಆಗ್ರಹ ಮಾಡುತ್ತಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಿಗೆ ಅವಕಾಶವಿಲ್ಲ. ದೇಶದ ಎಲ್ಲ ಮಹಿಳೆಯರು ಈ ಮಸೂದೆಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಬುದ್ಧಿ ಕಡಿಮೆ ಇದೆ. ಹಿಂದೆ ಲೋಕಸಭೆ ಕ್ಷೇತ್ರ ಎಷ್ಟಿರಬೇಕೆಂದು ಕಾಂಗ್ರೆಸ್‌ ನಾಯಕರೇ ತೀರ್ಮಾನ ಮಾಡಿದ್ದರು. ಜನಸಂಖ್ಯೆ ಆಧಾರಿತವಾಗಿಯೇ ಕ್ಷೇತ್ರ ಮರುವಿಂಗಡಣೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳು 42 ಆಗುತ್ತಿವೆ. ಇಲ್ಲಿ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ. ಕೇರಳದಲ್ಲಿ 20 ಕ್ಷೇತ್ರಗಳಿಂದ 30 ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59 ಕ್ಕೆ ಏರಿಕೆಯಾಗಲಿದೆ.  ಇದನ್ನು ಜಾರಿ ಮಾಡಿದರೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಎಲ್ಲರೂ ಟೆಂಟ್‌ ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ವಿರೋಧ ಪಕ್ಷಗಳ ನಾಯಕರಲ್ಲಿದೆ. ವಿರೋಧ ಪಕ್ಷಗಳ ನಾಯಕರಿಗೆ ಅಭಿವೃದ್ಧಿ ಬೇಕಿಲ್ಲ. ಕಾಂಗ್ರೆಸ್‌ನ ವಂಶಾಡಳಿತಕ್ಕೆ ಪೂರಕವಾಗಿ ಎಲ್ಲರೂ ಮಾತಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ಮಕ್ಕಳು ಹಿಂದಿ ಓದುವ ಮೊದಲೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಪರೀಕ್ಷೆಯ ಸಮಯದಲ್ಲಿ ತುಘಲಕ್‌ ದರ್ಬಾರ್‌ ಮಾಡುವ ಅಗತ್ಯವಿರಲಿಲ್ಲ. ತ್ರಿಭಾಷಾ ಸೂತ್ರ ಇಲ್ಲವೆಂದರೆ ಅಲ್ಲಿ ಕನ್ನಡವೂ ಇರುವುದಿಲ್ಲ. ವಿದ್ಯಾರ್ಥಿಗಳ ವಿಚಾರ ಬಂದಾಗ ಸದನ ಸಮಿತಿ ರಚಿಸಿ ಚರ್ಚೆ ಮಾಡಬೇಕಿತ್ತು ಅಥವಾ ವಿಧಾನಸಭೆ ಅಧಿವೇಶನ ಕರೆದು ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಏಕಾಏಕಿ ತೀರ್ಮಾನ ಮಾಡಿರುವುದು ಸರಿಯಲ್ಲ. ಕನ್ನಡಕ್ಕೆ ಆದ್ಯತೆ ನೀಡಬೇಕೆಂಬುದು ನಮ್ಮ ಆಗ್ರಹ. ದ್ವಿಭಾಷಾ ಸೂತ್ರದಿಂದಲೇ ಕನ್ನಡ ಬೆಳೆಯುತ್ತದೆ ಎನ್ನಲು ಸಾಧ್ಯವಿಲ್ಲ. ತ್ರಿಭಾಷಾ ನೀತಿ ಕುರಿತು ದೀರ್ಘ ಚರ್ಚೆ ನಡೆಯಬೇಕಿತ್ತು ಎಂದು ತಿಳಿಸಿದರು.

ಸಿಎಂ ಸ್ಥಾನ ಕುರಿತು ಇನ್ನೂ ಸಮಸ್ಯೆ ಬಗೆಹರಿದಿಲ್ಲ,  ಸರ್ಕಾರ ಸತ್ತುಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಹಾಗೂ ಎಲ್ಲ ಸಚಿವರ ಮಕ್ಕಳು ನಮ್ಮಪ್ಪನೇ ಸಿಎಂ ಎಂದು ಹೇಳಿಕೆ ನೀಡುತ್ತಿದ್ದಾರೆ. ಪ್ರತಿ ಮನೆಯಲ್ಲೂ  ಕ್ಯಾಬಿನೆಟ್‌ ರಚನೆಯಾಗಿದೆ.  ಬಜೆಟ್‌ನಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿ, ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಸರ್ಕಾರವೀಗ ತ್ರಿಶಂಕು ಸ್ಥಿತಿಯಲ್ಲಿದೆ ಎಂದರು.

ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿರುವುದಕ್ಕೆ ಮುಸ್ಲಿಮ್‌ ಮುಖಂಡರು ಕಾಂಗ್ರೆಸ್‌ ವಿರುದ್ಧ ಮಾತಾಡುತ್ತಿದ್ದಾರೆ. ಸಚಿವ ಜಮೀರ್‌ ಅಹ್ಮದ್‌ ಅವರನ್ನೂ ಟಾರ್ಗೆಟ್‌ ಮಾಡಲಾಗುತ್ತಿದೆ. ಇಡೀ ಪಕ್ಷ ಹಾಗೂ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ. ಇಂದೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬರಲಿದೆ. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಕ್ಕೆ ನಮಗೇನೂ ಸಮಸ್ಯೆಯಾಗಿಲ್ಲ, ಬಿಜೆಪಿ ಬೆಂಬಲಿಸುತ್ತೇವೆ ಎಂದು ಮುಸ್ಲಿಮರು ಹೇಳಿದ್ದಾರೆ ಎಂದರು.

Related Posts

Leave a Reply

Your email address will not be published. Required fields are marked *