ಎಲ್ಲ ಕಡೆ ಎಲ್ಪಿಜಿ ಕೊರತೆಯಿಂದ ಹೊಟೇಲ್, ಆಟೋರಿಕ್ಷಾ ಚಾಲಕರು ಸೇರಿದಂತೆ ದಿನಗೂಲಿ ಮೇಲೆ ಜೀವನ ನಡೆಸುವವರು ಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಈ ಬಡವರ ನೋವಿಗೆ ಸ್ಪಂದಿಸುವ ಯಾವ ಲಕ್ಷಣವನ್ನೂ ಇದುವರೆಗೆ ತೋರಿಲ್ಲ. ಇವರ ಸಂಘಟನೆಗಳು ತಮ್ಮ ಕಷ್ಟವನ್ನು ಸರ್ಕಾರದ ಮುಂದೆ ಹೇಳಿಕೊಂಡಿವೆಯೇ ಹೊರತು ತಮ್ಮಲ್ಲಿ ಕೆಲಸ ಮಾಡುವ ಜನರ ಕುಟುಂಬದ ನೋವಿನ ಬಗ್ಗೆ ಚಕಾರ ಎತ್ತಿಲ್ಲ. ಸಾಮಾಜಿಕ ಕಳಕಳಿ ಎಂದರೆ ಏನು ಎಂದುಪ್ರಶ್ನಿಸುವ ಕಾಲ ಬಂದಿದೆ.
ಬೆಂಗಳೂರು ನಗರವೂ ಸೇರಿದಂತೆ ಹಲವು ನಗರಗಳಲ್ಲಿ ಆಟೋರಿಕ್ಷಾ ಚಾಲಕರು ಎಲ್ಪಿಜಿ ಅನಿಲ ಇಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ಕರೋನಾ ಕಾಲದಲ್ಲಿ ನೀಡಿದಂತೆ ಆಹಾರಧಾನ್ಯ ಕಿಟ್ ಉಚಿತವಾಗಿ ಕೊಡುವುದು ಸೂಕ್ತ. ಪ್ರತಿಯೊಬ್ಬ ರಿಕ್ಷಾ ಚಾಲಕರಿಗೆ ೫ ಕೆಜಿ ಅಕ್ಕಿ, ಗೋಧಿ, ೧ ಕೆಜಿ ಬೇಳೆ, ೧ ಲೀಟರ್ ಅಡುಗೆ ಎಣ್ಣೆ ನೀಡಿದರೆ ಅವರ ಕುಟುಂಬ ಆಹಾರವಿಲ್ಲದೆ ಪರದಾಡುವುದು ತಪ್ಪುತ್ತದೆ. ಎಲ್ಪಿಜಿ ವಿತರಣೆ ರೀತಿ ಪಡಿತರ ಆಹಾರ ವಿತರಣೆ ಮುನಿಯಪ್ಪ ಅವರ ಖಾತೆಗೆ ಬರುವುದರಿಂದ ಅವರು ಕೇಂದ್ರ ಆಹಾರ ಸರಬರಾಜು ಇಲಾಖೆಯನ್ನು ಸಂಪರ್ಕಿಸಿದರೆ ಸಕಾರಾತ್ಮಕ ಪ್ರತಿಕ್ರಿಯೆ ಬರುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರ ನೆರವನ್ನೂ ಪಡೆಯಬಹುದು.
ಆಟೋರಿಕ್ಷಾ ಚಾಲಕರಲ್ಲಿ ಬಹುತೇಕ ಇದರ ಮೇಲೆ ಜೀವನ ನಡೆಸುವವರು. ಸಾಲದಲ್ಲಿ ರಿಕ್ಷಾ ಖರೀದಿ ಮಾಡಿರುತ್ತಾರೆ. ಪ್ರತಿದಿನ ಬರುವ ವರಮಾನದಲ್ಲೇ ಅವರು ಜೀವನ ನಡೆಸಬೇಕು. ಈಗ ಒಂದು ತಿಂಗಳಿನಿAದ ಯುದ್ಧದ ಪರಿಣಾಮ ಆಟೋರಿಕ್ಷಾ ಗೆ ಬೇಕಾದ ಅನಿಲ ಸರಬರಾಜು ನಿಂತು ಹೋಗಿದೆ. ಕೇಂದ್ರ ಸರ್ಕಾರ ಅನಿಲದ ಬದಲು ಪೆಟ್ರೋಲ್ ಬಳಸಲು ಹೇಳಿದೆ. ಅದು ಸುಲಭದ ಕೆಲಸವಲ್ಲ. ಅನಿಲದ ಕೊರತೆಗೆ ಯಾರೂ ಮೂಲ ಕಾರಣರಲ್ಲ. ಕಾರಣ ಹುಡುಕುತ್ತ ಹೋಗುವುದರಲ್ಲಿ ಅರ್ಥವಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವುದರಲ್ಲಿ ಉಪಯೋಗವೇನೂ ಇಲ್ಲ. ಈಗಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಅನಿಲ ಪೂರೈಕೆ ಸಹಜಸ್ಥಿತಿಗೆ ಬರುವವರೆಗೆ ರಿಕ್ಷಾ ಚಾಲಕರಿಗೆ ವಾರಕ್ಕೊಮ್ಮೆ ಉಚಿತ ಪಡಿತರ ವ್ಯವಸ್ಥೆ ಮಾಡುವುದು ಅಗತ್ಯ. ಇದು ಕಷ್ಟದ ಕೆಲಸವೇನೂ ಅಲ್ಲ. ಬಹುತೇಕ ಜನರ ಕೈಯಲ್ಲಿ ಪಡಿತರ ಚೀಟಿ ಇದ್ದೇ ಇರುತ್ತದೆ. ಅವರ ಕಾರ್ಡುಗಳಿಗೆ ಹೆಚ್ಚುವರಿ ಪಡಿತರ ನೀಡಿದರೆ ಆಯಿತು. ಇದು ಕೇಂದ್ರಕ್ಕೆ ಕಷ್ಟದ ಕೆಲಸವೇನೂ ಅಲ್ಲ.
ಕೇಂದ್ರದ ಬಳಿ ಕಾಪು ದಾಸ್ತಾನು ಇದ್ದೇ ಇರುತ್ತದೆ. ತುರ್ತು ಸಂದರ್ಭದಲ್ಲಿ ಬಳಸುವುದಕ್ಕೆ ಈ ದಾಸ್ತಾನು ಲಭ್ಯ. ಅದರಿಂದ ರಾಜ್ಯ ಸರ್ಕಾರ ರಾಜಕೀಯ ಬದಿಗೊತ್ತಿ ಕೇಂದ್ರದ ಮನವೊಲಿಸಿದರೆ ರಿಕ್ಷಾ ಚಾಲಕರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬಹುದು. ಈ ವಿಷಯದಲ್ಲಿ ನಮ್ಮ ರಾಜ್ಯ ಪ್ರತಿನಿಧಿಸುವ ಸಂಸದರು ಪಕ್ಷ ರಾಜಕಾರಣ ಮೂಲೆಗಿಟ್ಟು ಕೆಲಸ ಮಾಡಬೇಕು. ಈ ವಿಷಯದಲ್ಲಿ ನಮ್ಮನ್ನು ಪ್ರತಿನಿಧಿಸುವ ಸಂಸದರು ಸಾಕಷ್ಟು ಪ್ರಭಾವಿ ವ್ಯಕ್ತಿಗಳು. ಅದರಲ್ಲೂ ದೇವೇಗೌಡರು ಮೋದಿಗೆ ಮನವಿ ಮಾಡಿದರೆ ಕೆಲಸ ಸುಲಭವಾಗಿ ಕೈಗೂಡುವುದರಲ್ಲಿ ಸಂದೇಹವಿಲ್ಲ. ಎಲ್ಪಿಜಿ ಸಮಸ್ಯೆ ಸದ್ಯಕ್ಕೆಬಗೆಹರಿಯುವಂತೆ ಕಂಡು ಬರುವುದಿಲ್ಲ.
ಸಮಸ್ಯೆ ಬಗೆಹರಿದರೂ ಅನಿಲ ಸರಬರಾಜು ಸಹಜಸ್ಥಿತಿಗೆ ಬರಲು ಹಲವು ತಿಂಗಳು ಬೇಕೇ ಬೇಕು. ಅಲ್ಲಿಯವರಿಗೆ ಉಚಿತ ಕಿಟ್ ನೀಡಿದರೆ ರಿಕ್ಷಾ ಚಾಲಕರು ಬೀದಿಗಿಳಿದು ಹೋರಾಟ ನಡೆಸುವುದು ತಪ್ಪುತ್ತದೆ. ಇದರಿಂದ ಕೇಂದ್ರ ಮತ್ತು ರಾಜ್ಯಕ್ಕೆ ನಷ್ಟವೇನೂ ಆಗುವುದಿಲ್ಲ. ಅನ್ನಭಾಗ್ಯದಲ್ಲಿ ಇದನ್ನೂ ಸೇರ್ಪಡೆ ಮಾಡಬಹುದು. ಹಿಂದೆ ಕರೋನ ಕಾಲದಲ್ಲಿ ೬೦ ಲಕ್ಷ ಜನರಿಗೆ ಈ ರೀತಿ ಆಹಾರ ಧಾನ್ಯವನ್ನು ಉಚಿತವಾಗಿ ಹಂಚಿಕೆ ಮಾಡಲಾಯಿತು. ಆಗ ಬಡವರಲ್ಲದೆ ಸ್ಥಿತಿವಂತರೂ ಇದರ ಲಾಭ ಪಡೆದುಕೊಂಡಿದ್ದರು. ಈಗ ೫ ಲಕ್ಷ ಜನರಿಗೆ ನೆರವು ನೀಡುವುದು ಕಷ್ಟದ ಕೆಲಸವೇನಲ್ಲ. ಆಟೋ ಚಾಲಕರ ಸಂಘಟನೆಗಳು ಈ ವಿಷಯದಲ್ಲಿ ಆಸಕ್ತಿವಹಿಸಬೇಕು. ಕೇಂದ್ರ ಆಹಾರ ನಿಗಮ ಸಂಘಟನೆಗಳಿಗೆ ನೇರವಾಗಿ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತದೆ. ಅದರ ಸಾರಿಗೆ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದರೆ ವಿತರಣೆ ಸುಲಭ.


