Menu

ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ: ಡಿಕೆ ಶಿವಕುಮಾರ್ 

“ಗ್ಯಾರಂಟಿ ಯೋಜನೆ ಹಣ ಬಿಡುಗಡೆಗೆ ಆಕ್ಷೇಪಿಸಿ ಚುನಾವಣಾ ಆಯೋಗದ ಮೂಲಕ ಪತ್ರ ಬರೆದಿದ್ದು, ಚುನಾವಣಾ ಆಯೋಗದ ಮೂಲಕ ಈ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿಯು ಷಡ್ಯಂತ್ರ ರೂಪಿಸಿದೆ. ಆಮೂಲಕ ಬಡವರು ಹಾಗೂ ನಿರುದ್ಯೋಗಿ ಯುವಕರ ಮೇಲೆ ದಾಳಿ ಮಾಡಿದ್ದು, ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ದಾವಣಗೆರೆಯ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ  ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶಕ್ಕೆ ಮಾದರಿಯಾಗುವ ಯೋಜನೆ ಜಾರಿಗೆ ತಂದಿದ್ದೇವೆ. ಪ್ರಧಾನಮಂತ್ರಿಗಳು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಜಾರಿಯಾಗಿಲ್ಲ, ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಕೇಳಿದೆ. ಅಷ್ಟು ದೊಡ್ಡ ಸ್ಥಾನದಲ್ಲಿರುವವರಿಗೆ ಈ ಬಗ್ಗೆ ಮಾಹಿತಿ ಇರುತ್ತದೆ ಎಂದು ಭಾವಿಸಿದ್ದೆ. ನಮ್ಮ ಕಾರ್ಯಕ್ರಮವನ್ನು ಟೀಕೆ ಮಾಡಿದ ಅವರೇ ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡಿದ್ದಾರೆ ಎಂದು  ಹೇಳಿದರು.

ಬಿಜೆಪಿಯವರ ಮುಖವಾಡ ಕಳಚಿದೆ. ನಾವು ಯುವಕರಿಗೆ ಹಾಗೂ ಮಹಿಳೆಯರಿಗೆ ನೀಡುತ್ತಿರುವ ಕಾರ್ಯಕ್ರಮ ನಿಲ್ಲಿಸಲು ಮೊದಲಿನಿಂದಲೂ ದೊಡ್ಡ ಸಂಚು ರೂಪಿಸಿದ್ದಾರೆ. ನಮ್ಮ ಯೋಜನೆಗಳು ಈ ಚುನಾವಣೆಗೆ ಮಾಡಿರುವ ಯೋಜನೆಯಲ್ಲ. ಕಳೆದ ಎರಡೂವರೆ ವರ್ಷದಲ್ಲಿ ಜನರಿಗಾಗಿ 1.25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಿನಿಯೋಗಿಸಲಾಗಿದೆ. ಬಿಜೆಪಿಯವರ ಈ ಪತ್ರವು ಗ್ಯಾರಂಟಿ ಯೋಜನೆ ನಿಲ್ಲಿಸುವ ಷಡ್ಯಂತ್ರಕ್ಕೆ ಸಾಕ್ಷಿಯಾಗಿದೆ. ನಾವು ಕಾನೂನು ಅಡಿಯಲ್ಲಿ ಈ ಯೋಜನೆ ಹಣ ನೀಡುತ್ತಾ ಬಂದಿದ್ದೇವೆ. ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಬಡವರ ರಕ್ಷಣೆಗೆ ಜಾರಿಗೆ ತಂದಿರುವ ಯೋಜನೆ ನಿಲ್ಲಿಸಲು ಬಿಜೆಪಿಗರು ಮುಂದಾಗಿದ್ದಾರೆ ಎಂದು ಹರಿಹಾಯ್ದರು.

“ನಾನು ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದು, ಕಳೆದ ತಿಂಗಳವರೆಗಿನ ಕಂತನ್ನು ಬಿಡುಗಡೆ ಮಾಡಲಾಗಿದ್ದು, ಈ ತಿಂಗಳ ಕಂತನ್ನು ಚುನಾವಣೆ ಮುಗಿದ ಬಳಿಕ ಬಿಡುಗಡೆ ಮಾಡಲಾಗುವುದು. ಗ್ಯಾರಂಟಿ ಯೋಜನೆ ನಿಂತು ಹೋಗಲಿದೆ ಎಂಬ ಚಿಂತೆ ಬೇಡ. ನಾವು ಕೊಟ್ಟ ಮಾತಿಗೆ ಬದ್ಧವಾಗಿದ್ದೇವೆ. ನಿಮ್ಮಲ್ಲಿ ಆತಂಕ ಸೃಷ್ಟಿಸುತ್ತಿರುವವರು ಈ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಅವರ ಸರ್ಕಾರ ಮುಂದಿನ ದಿನಗಳಲ್ಲಿ ಬರುವುದಿಲ್ಲ” ಎಂದು ತಿಳಿಸಿದರು.

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಇಲ್ಲಿಯವರೆಗೂ ಶಾಂತಿಯುತವಾಗಿ ಪ್ರಚಾರ ನಡೆದಿದ್ದು, ಎಲ್ಲಾ ಪಕ್ಷದವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸರ್ಕಾರ ಅಧಿಕಾರಿಗಳು ಬಹಳ ಶಾಂತಿಯಿಂದ ಚುನಾವಣೆ ನಡೆಸಲು ಸಹಕಾರ ನೀಡಿದ್ದಾರೆ. ನಾವು ಹಾಗೂ ಸಿಎಂ ಅವರು ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿ ಬೆಂಬಲ ನೀಡಿದ್ದೇವೆ. ನಮ್ಮ ಪಕ್ಷದ ಸಂಪ್ರದಾಯದಂತೆ ಎರಡು ಕ್ಷೇತ್ರಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದೇವೆ. ದಾವಣಗೆರೆ ದಕ್ಷಿಣದಲ್ಲಿ ಆರಂಭದಲ್ಲಿ ಕೆಲವು ಸ್ನೇಹಿತರು ಹಾಗೂ ಮಾಧ್ಯಮಗಳು ಗೊಂದಲ ಮೂಡಿಸುವ ಪ್ರಯತ್ನ ಮಾಡಿದರು. ಕೆಲವರು ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಇದಕ್ಕೆ ಅನೇಕ ನಾಯಕರ ಸಹಕಾರ ಸಿಕ್ಕಿದ್ದು, ಈ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಕ್ಷೇತ್ರದ ಜನತೆ ಬಹಳ ಅದೃಷ್ಟವಂತರು, ಪುಣ್ಯವಂತರು, ಈ ನಗರ ಕಾಂಕ್ರೀಟ್ ರಸ್ತೆ, ಪಾರ್ಕ್, ಕೆರೆಗಳು ಸ್ವಚ್ಛತೆ ವಿಚಾರದಲ್ಲಿ ಬೆಂಗಳೂರಿಗಿಂತ ಉತ್ತಮವಾಗಿದೆ. ಇದಕ್ಕೆ ಶ್ರಮಿಸಿರುವ ಎಲ್ಲಾ ಅಧಿಕಾರಿಗಳು ಹಾಗೂ ಶಾಮನೂರು ಶಿವಶಂಕರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 95 ವರ್ಷವಾದರೂ ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಂಡು ಒಟ್ಟಾಗಿ ತೆಗೆದುಕೊಂಡು ಹೋಗಿದ್ದಾರೆ. ಪ್ರತಿ ಕ್ಯಾಬಿನೆಟ್ ಸಭೆಯಲ್ಲಿ ಈ ಭಾಗದ ಜನರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ನಾವುಗಳು ಮಾಡಲಾಗದ ಕೆಲಸವನ್ನು ಈ ನಗರದಲ್ಲಿ ಶಿವಶಂಕರಪ್ಪ ಅವರು ಹಾಗೂ ಮಲ್ಲಿಕಾರ್ಜುನ ಅವರು ಮಾಡಿದ್ದಾರೆ ಎಂದು ತಿಳಿಸಿದರು.

ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳಿಗೆ ಇವರು ದಾನ ಮಾಡಿ ಅಭಿವೃದ್ಧಿ ಮಾಡಿದ್ದಾರೆ. ಆಮೂಲಕ ದಾವಣಗೆರೆಗೆ ಶಕ್ತಿ ತುಂಬಿದ್ದಾರೆ. ನಾವು ಈ ಕ್ಷೇತ್ರದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಸಮೀಕ್ಷೆ ಮಾಡಿಸಿದ್ದು, ಶೆ.70ಕ್ಕಿಂತ ಹೆಚ್ಚಿನ ಜನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದಾಗಿ ತಿಳಿಸಿದರು. ಶಾಮನೂರು ಅವರ ಕುಟುಂಬ ಕ್ಷೇತ್ರದ ಜನತೆಗೆ ಆರೋಗ್ಯ, ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸೇವೆ ಮಾಡುತ್ತಾ ಬಂದಿದೆ. ಕೋವಿಡ್ ಸಮಯದಲ್ಲಿ ಮೊದಲ ಬಾರಿಗೆ ಉಚಿತ ಲಸಿಕೆ ಹಂಚಿಕೆ ಮಾಡಿದ್ದರು ಎಂದರು.

ನಾನು ವಿಶೇಷವಾಗಿ ವರ್ತಕರು ಹಾಗೂ ಅಲ್ಪಸಂಖ್ಯಾತರ ಬಳಿ ಸಮೀಕ್ಷೆ ಮಾಡಿಸಿದ್ದು, ಎಲ್ಲರೂ ಶಿವಶಂಕರಪ್ಪನವರ ಆಡಳಿತದಲ್ಲಿ ಈ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದೇ, ಇದನ್ನು ಶಾಂತಿನಗರವಾಗಿ ರೂಪಿಸಿದ್ದರು. ಇಲ್ಲಿ ಯಾವುದೇ ರೀತಿಯ ಶೋಷಣೆ, ಸಮಸ್ಯೆಗೆ ಅವಕಾಶ ನೀಡಿಲ್ಲ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಇದು ನಮಗೆ ಶಕ್ತಿ ತರುವ ವಿಚಾರವಾಗಿದೆ. ಹೊಸ ಪೀಳಿಗೆ, ಯುವಕರ ಚಿಂತನೆಯನ್ನು ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಪಕ್ಷದ ಎಲ್ಲಾ ಮುಖಂಡರು ಸೇರಿ ಈ ಕ್ಷೇತ್ರದಲ್ಲಿ ಒಬ್ಬ ಯುವಕ, ವಿದ್ಯಾವಂತ ಹಾಗೂ ಪ್ರಜ್ಞಾವಂತನಿಗೆ ಟಿಕೆಟ್ ನೀಡಲು ತೀರ್ಮಾನ ಮಾಡಿದ್ದೇವೆ. ಇವರ ತಾಯಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇಲ್ಲವಾದರೂ ನಾವೇ ಬಲವಂತ ಮಾಡಿ ಸ್ಪರ್ಧೆ ಮಾಡುವಂತೆ ಮಾಡಿ ಗೆಲ್ಲಿಸಲಾಗಿದೆ. ಅವರು ಲೋಕಸಭೆಯಲ್ಲಿ ಉತ್ತಮವಾಗಿ ಕೆಲಸ ಮಾಡಿ ನಮ್ಮ ಪಕ್ಷದ ಆಸ್ತಿಯಾಗಿ ಬೆಳೆಯುತ್ತಿದ್ದಾರೆ. ಶಿವಶಂಕರಪ್ಪನವರು ಬಡವರಿಗಾಗಿ ಉಚಿತ ಸಭಾಂಗಣಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಯಾರು ಎಷ್ಟೇ ಶ್ರೀಮಂತರಾಗಬಹುದು. ಆದರೆ ಜನರಿಂದ ಕೊಡುಗೈ ದಾನಿ ಎಂದು ಕರೆಸಿಕೊಳ್ಳುವುದು ಬಹಳ ವಿಶೇಷವಾದದ್ದು. ಇದನ್ನು ನಮ್ಮ ಅಭ್ಯರ್ಥಿ ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದು ಭರವಸೆ ನೀಡಿದರು.

Related Posts

Leave a Reply

Your email address will not be published. Required fields are marked *