ವಿದೇಶಿ ಮಾಧ್ಯಮಕ್ಕೆ ಪಾಕ್ ಮಾಜಿ ರಾಜತಾಂತ್ರಿಕ ಬಾಸೀದ್ ನೀಡಿರುವ ಹೇಳಿಕೆ ನಿಜಕ್ಕೂ ಸೋಜಿಗ. ಅಮೆರಿಕಾ ಏನಾದರೂ ಪಾಕ್ ಮೇಲೆ ದಾಳಿ ನಡೆಸಿದರೆ, ಈ ದೇಶ ಭಾರತದ ಮೇಲೆ ಯುದ್ಧ ನಡೆಸುವುದಂತೆ.. ! ದೆಹಲಿ ಮತ್ತು ಮುಂಬಯಿ ಮಹಾನಗರಗಳನ್ನು ಉಡಾಯಿಸುವುದಂತೆ..! ಇಂತಹ ಪ್ರಚೋದನಕಾರಿ ಹೇಳಿಕೆಗಳು ಈ ಸಮಯದಲ್ಲಿ ಅನಗತ್ಯ ಮತ್ತು ಅರ್ಥಹೀನ.
ಮಧ್ಯ ಪ್ರಾಚ್ಯ ಯುದ್ಧಕ್ಕೆ ಸದ್ಯ ಕದನ ವಿರಾಮದ ಲಕ್ಷಣಗಳು ಗೋಚರಿಸುತ್ತಿಲ್ಲ. ಬಿಗಿಪಟ್ಟು ಬಿಡದ ಇರಾನ್, ಮೊಂಡುಪಟ್ಟುವಿನಿಂದ ದೂರ ಸರಿಯದ ಅಮೆರಿಕಾ. ಇವರಿಬ್ಬರನ್ನು ಮನವೊಲಿಸುವ ಪ್ರಯತ್ನಗಳು ಸಮೀಪದಲ್ಲಂತೂ ಕಾಣುತ್ತಿಲ್ಲ.
ಪ್ರಪಂಚದ ಬಹತೇಕ ದೇಶಗಳು ಯುದ್ಧ ಬೇಡವೆಂದು ಹೇಳುತ್ತಿವೆ. ಆದರೆ ದಾಯಾದಿ ದೇಶ ಪಾಕಿಸ್ಥಾನ ಯುದ್ಧ ಬೇಕೆಂದು ಕನವರಿಸುತ್ತಿದೆ. ವಿದೇಶಿ ಮಾಧ್ಯಮಕ್ಕೆ ಪಾಕ್ ಮಾಜಿ ರಾಜತಾಂತ್ರಿಕ ಬಾಸೀದ್ ನೀಡಿರುವ ಹೇಳಿಕೆ ನಿಜಕ್ಕೂ ಸೋಜಿಗ. ಅಮೆರಿಕಾ ಏನಾದರೂ ಪಾಕ್ ಮೇಲೆ ದಾಳಿ ನಡೆಸಿದರೆ, ಈ ದೇಶ ಭಾರತದ ಮೇಲೆ ಯುದ್ಧ ನಡೆಸುವುದಂತೆ.. !
ದೆಹಲಿ ಮತ್ತು ಮುಂಬಯಿ ಮಹಾನಗರಗಳನ್ನು ಉಡಾಯಿಸುವುದಂತೆ.. ! ಇಂತಹ ಹೇಳಿಕೆಗಳು ಪ್ರಚೋದನಕಾರಿ. ಇದು ಅನಗತ್ಯ ವೈರತ್ವಕ್ಕೆ ದಾರಿಮಾಡುವಂತಹದು. ಅಸಲಿಗೆ ಅಮೆರಿಕ ಪಾಕ್ ಮೇಲೆ ಯುದ್ಧ ಸಾರಿದರೆ, ಪಾಕ್ ಭಾರತದ ಮೇಲೇಕೆ ಯುದ್ಧ ಸಾರಬೇಕು? ಪಾಕ್ ಮನದಲ್ಲಿ ಸದಾ ಭಾರತದ್ದೇ ಚಿಂತೆ ! ಕಳೆದ ಎಪ್ಪತ್ತು ವರ್ಷಗಳಿಂದ ಜಾಗತಿಕ ಮಟ್ಟದ ಉಗ್ರಗಾಮಿ ಸಂಘಟನೆಗಳಿಗೆ ಆಸರೆ ನೀಡಿದ ಪಾಕಿಸ್ಥಾನದ ಮೇಲೆ ಯಾರೇ ಆಗಲಿ, ಮಿಲಿಟರಿ ಕಾರ್ಯಾಚರಣೆ ನಡೆಸಲು ಸಕಾರಣವಿದೆ.
ಅಮೆರಿಕದ ವಿಶ್ವ ವ್ಯಾಪಾರ ಸಂಘಟನೆ ಕಟ್ದಡವನ್ನು ಧ್ವಂಸಗೊಳಿಸಿದ ಆಲ್ ಖೈದಾ ರೂವಾರಿ ಓಸಾಮಾ ಬಿನ್ ಲಾಡೆನ್ ಕೊನೆ ಕ್ಷಣದ ಅಡಗುದಾಣ ಪತ್ತೆಯಾಗಿದ್ದೇ ಪಾಕ್‌ನೆಲದಲ್ಲಿ ! ಇದನ್ನು ಇತಿಹಾಸ ಮರೆಯಲು ಸಾಧ್ಯವೇ ? ಮುಂಬಯಿ ರಕ್ತಪಾತಗಳಿಗೆ ಕಾರಣನಾದ ಮಹಾಪಾತಕಿ ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಒಪ್ಪಿಸಲು ಪಾಕ್‌ಗೆ ಯೋಗ್ಯತೆ ಮತ್ತು ಎದೆಗಾರಿಕೆ ಎಲ್ಲಿದೆ ?
ಅಪರೇಷನ್ ಸಿಂಧೂರ್ ಕಾರ್ಯಾಚರಣೆ ಬಳಿಕವೂ ಪಾಕ್ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ದುರದೃಷ್ಟಕರ. ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ವಿನಾಕಾರಣವಾಗಿ ಮಾರಣಹೋಮ ಮುಂದುವರಿದಿದೆ. ಅಮಾಯಕರ ಅಸ್ತಿ- ಪಾಸ್ತಿ ಮತ್ತು ಪ್ರಾಣಕ್ಕೆ ದೊಡ್ಡ ಗಂಡಾಂತರ ಒದಗಿದೆ. ಇಲ್ಲಿನ ಲಕ್ಷಾಂತರ ಮಂದಿ ಅಮಾಯಕ ಪ್ರಜೆಗಳ ಪ್ರತಿ ಕ್ಷಣದ ಬದುಕು ಸಂಪೂರ್ಣ ಆತಂಕಮಯವಾಗಿದೆ. ವಿದೇಶಿ ಮಟ್ಟದಲ್ಲಿ ವ್ಯಾಪಾರ ಮತ್ತು ವಹಿವಾಟು, ವಿಮಾನ ಮತ್ತು ಹಡಗುಗಳ ಸಂಚಾರ ಸ್ಪಬ್ದಗೊಂಡಿದೆ ದೈನಂದಿನ ಜೀವನ ಅಲ್ಲೋಲ ಕಲ್ಲೋಲವಾಗಿದೆ. ಇದರಿಂದ ಪಾಕಿಸ್ಥಾನದ ದೈನಂದಿನ ಬದುಕಿಗೂ ತೀವ್ರ ನಷ್ಟವಾಗಿದೆ. ಈ ಸಂಕಷ್ಟದಿಂದ ಪಾರಾಗಲು ಇಡೀ ಪ್ರಪಂಚದ ಎಲ್ಲ ದೇಶಗಳು ಮುಂದಾಗಬೇಕಿದೆಯೇ ವಿನಹ, ಪರಸ್ಪರ ಹಗೆತನ ಮತ್ತು ದ್ವೇಷವನ್ನು ಉತ್ತೇಜಿಸುವ ಮಾತುUಳನ್ನಾಡುವುದು ಖಂಡನೀಯ ಮತ್ತು ಅರ್ಥಹೀನ. ಸಾಮರಸ್ಯದಿಂದ ಬದುಕಬೇಕಾದರೆ, ಪ್ರತಿಯೋರ್ವನಿಗೆ ಸಹಿಷ್ಣುತೆ ಮತ್ತು ಧಾರ್ಮಿಕ ಸಂಯಮವೂ ಬೇಕು. ಕೇವಲ ಧರ್ಮಾಧಾರಿತ ಸಂಗತಿಗಳನ್ನು ಬೆಟ್ಟದಷ್ಟು ಮಾಡಿ ಬಡಿದಾಡುವ ಸಂಸ್ಕೃತಿಯಿಂದ ಭಾರತ ಯಾವಾಗಲೂ ಬಲುದೂರ. ಒಂದುನೂರ ಇಪ್ಪತ್ತು ಕೋಟಿ ವಿವಿಧ ಧರ್ಮ, ಜಾತಿ ಮತ್ತು ಸಮುದಾಯದ ಜನತೆ ಸಂಯಮ ಮತ್ತು ಸೌಹಾರ್ದತೆಯಿಂದ ಭಾರತದಲ್ಲಿ ನೆಮ್ಮದಿಯಿಂದ ಇದ್ದಾರೆಂದರೆ ಇದರ ಹಿಂದಿರುವ ಅದಮ್ಯ ಜೀವನ ಮೌಲ್ಯದ ಬಗ್ಗೆ ಇಂದು ಬಾಸೀದ್ ಆಲೋಚಿಸಬೇಕಿದೆ. ಇಂತಹ ಸಮಯದಲ್ಲಿ ಪ್ರಪಂಚಕ್ಕೆ ಬೇಕಿರುವುದು ಯುದ್ಧ ಶಮನವೇ ವಿನಹ ಸಮರ ಪ್ರಚೋದನೆಯ ಅವಿವೇಕಿ ಮಾತುಗಳಲ್ಲ.


