ತುಮಕೂರಿನಲ್ಲಿ ಬೈಕ್ನಲ್ಲಿ ತೆರಳುತ್ತಿದ್ದಾಗ ಜೇನುನೊಣಗಳು ದಾಳಿ ಮಾಡಿದ್ದರಿಂದ ಕಾರು ಶೋರೂಂ ಮೇಲ್ವಿಚಾರಕ ವಿಜಯ್ ಪ್ರಕಾಶ್(65) ಎಂಬವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ಕೈದು ಜನ ಅಸ್ವಸ್ಥರಾಗಿದ್ದಾರೆ.
ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ. ಕೋತಿ ಕೀಟಲೆ ಮಾಡಿದ ಹಿನ್ನೆಲೆ ಏಕಾಏಕಿ ಜೇನು ನೊಣಗಳು ದಾರಿ ಹೋಕರ ಮೇಲೆ ದಾಳಿ ನಡೆಸಿದೆ. ವಿಜಯ್ ಪ್ರಕಾಶ್ ಕೆಲಸ ಮುಗಿಸಿ ಸಂಜೆ ಮನೆಗೆ ಬರುವಾಗ ಮಾರುತಿ ನಗರದ ಪಿಎನ್ ಟಿ ಕ್ವಾಟ್ರಸ್ ಬಳಿ ಹಲವರ ಮೇಲೆ ಜೇನುನೊಣಗಳು ದಾಳಿ ನಡೆಸಿವೆ. ಬೈಕ್ನಲ್ಲಿ ಬರುತ್ತಿದ್ದಾಗ ಜೇನುನೊಣ ದಾಳಿಯಿಂದ ತಪ್ಪಿಸಿಕೊಳ್ಳಲು ವಿಜಯ್ ಪ್ರಕಾಶ್ ಹರಸಾಹಸ ಪಟ್ಟಿದ್ದರು. ಶರ್ಟ್ ಬಿಚ್ಚಿ ಅವನ್ನು ಓಡಿಸಲು ಪ್ರಯತ್ನ ಮಾಡಿದ್ದರು. ಆದರೂ ಜೇನು ನೊಣಗಳು ಅವರ ಮುಖ ಸೇರದಂತೆ ದೇಹದ ಹಲವು ಭಾಗಗಳ ಮೇಲೆ ದಾಳಿ ಕಚ್ಚಿವೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಪ್ರಾಣ ಹೋಗಿದೆ.
ತನ್ನದಲ್ಲದ ತಪ್ಪಿಗೆವಿಜಯ್ ಪ್ರಕಾಶ್ ಜೀವ ಹೋಗಿದೆ. ನಮ್ಮ ಅಪ್ಪನಿಗೆ ಬಂದ ಪರಿಸ್ಥಿತಿ ಮತ್ತೆ ಯಾರಿಗೂ ಬಾರದಿರಲಿ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅವರ ಮಗಳು ಆಗ್ರಹಿಸಿದ್ದಾರೆ. ಎರಡ್ಮೂರು ದಿನಗಳ ಹಿಂದೆ ಚಿಕಕಮಗಳೂರಿನಲ್ಲಿ ರೈತರೊಬ್ಬರು ಜೇನು ನೊಣಗಳ ದಾಳಿಗೆ ಬಲಿಯಾಗಿದ್ದರು. ಕಳೆದ ವಾರ ಬೆಂಗಳೂರಿನ ಬನಶಂಕರಿಯಲ್ಲಿ ಜೇನುನೊಣ ದಾಳಿಯಿಂದ ತಾಯಿ ಮಗಳ ರಕ್ಷಿಸಲು ಹೋಗಿದ್ದ ವೀರಕಪುತ್ರ ಶ್ರೀನಿವಾಸ್ ಅವರು ಜೇನು ನೊಣ ಕಡಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದರು.


