Menu

ರಜೆ ನೀಡಲು ಕಿರಿಕ್‌, ಸಂಬಳ ಕಟ್‌ ಮಾಡಿದ ಮ್ಯಾನೇಜರ್‌ಗೆ ಗುಂಡಿಕ್ಕಿ ಫಿನಿಶ್‌ ಮಾಡಿದ ಸೆಕ್ಯುರಿಟಿ

ರಜೆಯನ್ನೂ ನೀಡದೆ, ಸಂಬಳದಲ್ಲೂ ಕಟ್ ಮಾಡಿದ್ದಕ್ಕೆ ರೊಚ್ಚಿಗೆದ್ದ ಸೆಕ್ಯುರಿಟಿ ಸಿಬ್ಬಂದಿ ಬ್ಯಾಂಕ್ ಮ್ಯಾನೇಜರ್​ಗೆ ಶೂಟ್ ಮಾಡಿ ಕೊಂದು ಹಾಕಿರುವ ಘಟನೆ ಗಾಜಿಯಾಬಾದ್​ನ ಲೋನಿ ಗಡಿಯಲ್ಲಿರುವ ಬಲರಾಮ್ ನಗರ ಬ್ಯಾಂಕ್‌ ಕಚೇರಿಯಲ್ಲಿ ನಡೆದಿದೆ.

ಬ್ಯಾಂಕಿನೊಳಗೆ ನಡೆದ ಮಾತಿನ ಚಕಮಕಿಯ ನಂತರ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಪಿಎಸ್‌ಬಿ)ನ 36 ವರ್ಷದ ಮ್ಯಾನೇಜರ್ ಅನ್ನು ಸೆಕ್ಯುರಿಟಿ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಕೊಲೆಯ ಆರೋಪಿ ಮತ್ತು ಸಹಚರರಿಬ್ಬರನ್ನು ಬಂಧಿಸಲಾಗಿದೆ. ರಜೆ ಮತ್ತು ಸಂಬಳದ ವಿಷಯವಾಗಿ ಸೆಕ್ಯುರಿಟಿ ಗಾರ್ಡ್ ಕೋಪಗೊಂಡಿದ್ದರು ಎನ್ನಲಾಗಿದೆ.

ಮೃತ ಬ್ಯಾಂಕ್ ಮ್ಯಾನೇಜರ್ ಬಿಹಾರದ ಪಾಟ್ನಾದ ಅಭಿಷೇಕ್ ಕುಮಾರ್ ಎಂದು ಗುರುತಿಸಲಾಗಿದೆ. ಸಾಹಿಬಾಬಾದ್ ಬಳಿಯ ಭೋಪ್ರಾದಲ್ಲಿ ಅವರು ವಾಸಿಸುತ್ತಿದ್ದರು. ಕೊಲೆ ಆರೋಪಿ ಗಾರ್ಡ್ ಬಾಗ್‌ಪತ್ ಜಿಲ್ಲೆಯ ಮನ್ಸೂರ್‌ಪುರದ ನಿವಾಸಿ ರವೀಂದರ್ ಹೂಡಾ ಎಂದು ಗುರುತಿಸಲಾಗಿದೆ.

ಘಟನೆ ನಂತರ ಸೆಕ್ಯುರಿಟಿ ಗಾರ್ಡ್ ಮತ್ತು ಸಹಚರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಸೈನಿಕ ರವೀಂದ್ರ ಹೂಡಾ ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮ್ಯಾನೇಜರ್ ಅಭಿಷೇಕ್ ಕುಮಾರ್ ಅವರ ಕ್ಯಾಬಿನ್‌ಗೆ ಹೋಗಿದ್ದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ವಲ್ಪ ಸಮಯದ ನಂತರ ಗುಂಡೇಟಿನ ಶಬ್ದಗಳು ಕೇಳಿಸಿವೆ. ಬ್ಯಾಂಕ್ ಸಿಬ್ಬಂದಿ ನೋಡಿದಾಗ ಮ್ಯಾನೇಜರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಿದಾಗ, ಅಲ್ಲಿನ ವೈದ್ಯರು ಮ್ಯಾನೇಜರ್‌ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

Related Posts

Leave a Reply

Your email address will not be published. Required fields are marked *