Menu

ದಾವಣಗೆರೆ ದಕ್ಷಿಣ: ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆಯೇ ಸವಾಲು, ಶಾಮನೂರು ಕುಟುಂಬದ ಪಾರುಪತ್ಯ ಕಂಟಿನ್ಯೂ?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿದ್ದು,  ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಈ ಬಾರಿ ‘ಬದಲಾವಣೆ’ಯ ಗಾಳಿ ಬೀಸುತ್ತದೆಯೇ ಅಥವಾ ಶಾಮನೂರು ಕುಟುಂಬದ ಪಾರುಪತ್ಯ ಮುಂದುವರಿಯುತ್ತದೆಯೇ ಎಂಬ ಕುತೂಹಲ ಮೂಡಿದ್ದು, ಚರ್ಚೆ ಬಿರುಸುಗೊಂಡಿದೆ.

ಕಾಂಗ್ರೆಸ್‌ನಲ್ಲಿ ‘ಕುಟುಂಬ’ ವರ್ಸಸ್ ‘ಸಮುದಾಯ’ ಪೈಪೋಟಿ: ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್‌ಗಾಗಿ ಆಂತರಿಕ ಸಂಘರ್ಷ ತಾರಕಕ್ಕೇರಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಉತ್ತರಾಧಿಕಾರಿಯಾಗಿ ಅವರ ಮೊಮ್ಮಗ ಸಮರ್ಥ್ ಶಾಮನೂರು ಅಥವಾ ಪುತ್ರ ಎಸ್.ಎಸ್. ಗಣೇಶ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಆದರೆ, ಕ್ಷೇತ್ರದಲ್ಲಿ ಶೇ 30ಕ್ಕಿಂತ ಅಧಿಕವಿರುವ ಮುಸ್ಲಿಂ ಮತದಾರರನ್ನು ಸೆಳೆಯಲು ಅಲ್ಪಸಂಖ್ಯಾತ ನಾಯಕರಿಗೇ ಟಿಕೆಟ್ ನೀಡಬೇಕು ಎಂಬ ಕೂಗು ಬಲವಾಗಿದೆ.

ಅಬ್ದುಲ್ ಜಬ್ಬಾರ್ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಲಾಬಿ ನಡೆಸುತ್ತಿರುವುದು ಶಾಮನೂರು ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ‘ಅಹಿಂದ’ ಮತಗಳೇ ಕಾಂಗ್ರೆಸ್‌ನ ಜೀವಾಳವಾಗಿದ್ದು, ಟಿಕೆಟ್ ಹಂಚಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮತ ಧ್ರುವೀಕರಣದ ಭೀತಿ ಎದುರಾಗಿದೆ. ಬಿಜೆಪಿಯಲ್ಲಿ ‘ಹಳಬರು-ಹೊಸಬರ’ ನಡುವೆ ಓಟ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಲು ಬಿಜೆಪಿ ಭರ್ಜರಿ ತಂತ್ರ ರೂಪಿಸುತ್ತಿದೆ.

ಕಳೆದ ಬಾರಿ ಸೋತಿದ್ದ ಬಿ.ಜಿ.ಅಜಯ್ ಕುಮಾರ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರೊಂದಿಗೆ ಯಶವಂತರಾವ್ ಜಾಧವ್ ಮತ್ತು ವಾಲ್ಮೀಕಿ ಸಮುದಾಯದ ಶ್ರೀನಿವಾಸ್ ದಾಸಕರಿಯಪ್ಪ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಲಿಂಗಾಯತ ಮತಗಳನ್ನು ವಿಭಜಿಸಿ, ಹಿಂದುಳಿದ ವರ್ಗಗಳ ಮತಗಳನ್ನು ಕ್ರೋಢೀಕರಿಸುವುದು ಬಿಜೆಪಿಯ ಪ್ರಮುಖ ಕಾರ್ಯಸೂಚಿಯಾಗಿದೆ.

ಮೈತ್ರಿ ಮತ್ತು ಬಂಡಾಯದ ಲೆಕ್ಕಾಚಾರ : ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಹಿಮಾ ಪಟೇಲ್ ಕಣಕ್ಕಿಳಿದರೆ ಹಳೆಯ ಮೈಸೂರು ಭಾಗದ ಪ್ರಭಾವ ಇಲ್ಲಿಯೂ ಪ್ರತಿಫಲಿಸಬಹುದು ಎಂಬ ಲೆಕ್ಕಾಚಾರವಿದೆ. ಬಂಡಾಯದ ಭೀತಿ: ವಿನಯ್ ಕುಮಾರ್ ಅವರಂತಹ ನಾಯಕರು ‘ಸ್ವಾಭಿಮಾನಿ’ ಪಟ್ಟು ಹಿಡಿದು ಪಕ್ಷೇತರರಾಗಿ ಸ್ಪರ್ಧಿಸಿದರೆ ಅದು ನೇರವಾಗಿ ಕಾಂಗ್ರೆಸ್‌ಗೆ ಲಾಭವಾಗುವ ಸಾಧ್ಯತೆಯಿದೆ. ಕಳೆದ 4 ದಿನಗಳಿಂದ ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಸರಣಿ ಸಭೆಗಳಲ್ಲಿ ವಿನಯ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೆ ಇತ್ತ ಮುನಿಸಿಕೊಂಡಿದ್ದ ಜಿಲ್ಲಾ ಮುಖಂಡರು ಕೈ ಕೈ ಹಿಡಿದುಕೊಂಡು ನಾವೀಗ ಬಾಯಿ ಬಾಯಿ ಎಂದಿದ್ದಾರೆ.

ಕಾoಗ್ರೆಸ್ ಮೂಲಗಳ ಪ್ರಕಾರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮ ಪುತ್ರ ಎಸ್.ಎಂ.ಸಮರ್ಥ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಇದು ಸಹಜವಾಗಿಯೇ ಅಲ್ಪಸಂಖ್ಯಾತ ಕೆಲ ಮುಖಂಡರಿಗೆ ಪಥ್ಯವಾಗದೇ ಇರಬಹುದು. ಆದರೆ ಪಕ್ಷಕ್ಕೆ ಇದು ಅನಿವಾರ್ಯ, ಅಂತಿಮ ಆಯ್ಕೆ.

ಮತ್ತೊಂದೆರೆ ಬಿಜೆಪಿಯಲ್ಲಿ ಏಳೆಂಟು ಮಂದಿ ಆಕಾಂಕ್ಷಿಗಳಿರುವುದು ಕಮಲಕ್ಕೆ ಅಭ್ಯರ್ಥಿ ಆಯ್ಕೆ ಕೊಂಚ ಕಗ್ಗಂಟಾಗಬಹುದು. ಇದೆಲ್ಲದರ ಮಧ್ಯೆ ಸ್ವಾಭಿಮಾನಿ ಹೆಸರು ಕೇಳಿ ಬರುತ್ತಿರುವುದು ಪಕ್ಷಕ್ಕಾಗಿ ದುಡಿದವರಿಗೆ ಬೇಸರ ತರಿಸಬಹುದು. ಆದರೆ ಅಂತಿಮವಾಗಿ ಹೈ ಕಮಾಂಡ್ ತೀರ್ಮಾನ ಒಪ್ಪಿಕೊಳ್ಳುವುದು ಅನಿವಾರ್ಯವಾಗಲಿದೆ.

ಒಟ್ಟಾರೆಯಾಗಿ, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಬಿಜೆಪಿ ಇತಿಹಾಸ ಬದಲಿಸಲು ತುಡಿಯುತ್ತಿದೆ. ಅಭ್ಯರ್ಥಿಗಳ ಆಯ್ಕೆ ಮತ್ತು ಸ್ಥಳೀಯ ಸಮಸ್ಯೆಗಳ ಮೇಲೆ ಈ ಚುನಾವಣೆಯ ಅಂತಿಮ ಫಲಿತಾಂಶ ನಿರ್ಧಾರವಾಗಲಿದೆ.

Related Posts

Leave a Reply

Your email address will not be published. Required fields are marked *