Menu

ಬಾಗಲಕೋಟೆ ಅಸೆಂಬ್ಲಿ ಟಿಕೆಟ್‌: ಎಚ್‌ವೈ ಮೇಟಿಯ ನಾಲ್ವರು ಮಕ್ಕಳ ಗುದ್ದಾಟ ಕಾಂಗ್ರೆಸ್‌ಗೆ ಮುಳು?

* ಬಾಲಚಂದ್ರ ರೂಗಿ

ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಬಂಡಾಯದ ಬಾವುಟ ಹಾರಿದೆ. ಮೇಟಿ ಕುಟುಂಬದಲ್ಲಿ ಸಹೋದರ-ಸಹೋದರಿಯರ ಬಹಿರಂಗ ಗುದ್ದಾಟ ಶುರುವಾಗಿದೆ.

ದಿ.ಎಚ್.ವೈ.ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆಗೆ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಮೇಟಿ ಕುಟುಂಬದಲ್ಲಿಯೇ ಒಬ್ಬರಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ. ಆದರೆ ಮೇಟಿ ಅವರ ನಾಲ್ವರು ಮಕ್ಕಳು ಮೇಲ್ನೋಟಕ್ಕೆ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಹೇಳುತ್ತಿದ್ದಾರಾದರೂ ಈಗ ನಾನೊಂದು ತೀರಾ, ನೀನೊಂದು ತೀರಾ ಎನ್ನುತ್ತಿದ್ದಾರೆ.

ದಿ.ಎಚ್.ವೈ.ಮೇಟಿಯವರಿಗೆ ನಾಲ್ವರು ಮಕ್ಕಳು. ಅದರಲ್ಲಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ನಾಲ್ವರೂ ಟಿಕೆಟ್ ಆಕಾಂಕ್ಷಿಗಳೇ ಆಗಿದ್ದಾರೆ. ಹೀಗಾಗಿಯೇ ಈ ಗೊಂದಲ ಸೃಷ್ಟಿಯಾಗಿದ್ದು, ಅದರಲ್ಲಿ ಒಬ್ಬ ಸುಪುತ್ರಿ ಮಾರ್ಚ 20ರಂದು ನಾಮಪತ್ರ ಸಲ್ಲಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಒಂದು ಮೂಲಗಳ ಪ್ರಕಾರ ಕಾಂಗ್ರೆಸ್ನ ಟಿಕೆಟ್ ದಿ.ಮೇಟಿಯವರ ಹಿರಿಯ ಮಗ ಮಲ್ಲಿಕಾರ್ಜುನ ಮೇಟಿಗೆ ಎನ್ನಲಾಗುತ್ತಿದೆ. ಆದರೆ ಕಿರಿಯ ಪುತ್ರ ಉಮೇಶ ಕೂಡ ತಮ್ಮ ಬೆಂಬಲಿಗರೊಂದಿಗೆ ನಾನಾ ಮುಖಂಡರನ್ನು ಸಂಪರ್ಕಿಸಿ ತಮಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದೆಡೆ ಒಬ್ಬ ಸುಪುತ್ರಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಕೂಡ ಟಿಕೆಟ್ ಕೇಳಿದ್ದಾರೆ. ಇದೆಲ್ಲದರ ನಡುವೆಯೇ ಇನ್ನೊಬ್ಬ ಸುಪುತ್ರಿ ಮಹಾದೇವಿ ಮೇಟಿ ತಮಗೆ ಪಕ್ಷದ ಟಿಕೆಟ್ ಸಿಗಲಿ, ಬಿಡಲಿ ತಾವು ಸ್ಪರ್ಧೆ ಮಾಡುವುದು ಖಚಿತ ಎನ್ನುತ್ತಿದ್ದಾರೆ. ಪಕ್ಷ ತಮ್ಮನ್ನು ಬಿಟ್ಟು ಯಾರಿಗೆ ಟಿಕೆಟ್ ನೀಡಿದರೂ ತಾವು ಬಂಡಾಯ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ.

ಜಾಲತಾಣದಲ್ಲಿ ಪೋಸ್ಟ್
ಮಹಾದೇವಿ ಮೇಟಿ ಅವರು ಈಗಾಗಲೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಮಾರ್ಚ 20ರಂದು ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜತೆಗೂಡಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಜನರ ಆಶೀರ್ವಾದ, ಬೆಂಬಲ ಮತ್ತು ವಿಶ್ವಾಸದೊಂದಿಗೆ ಬಾಗಲಕೋಟೆಯಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ನಂಬಿಕೆ ನಮಗಿದೆ. ನಿಮ್ಮ ಆಶೀರ್ವಾದ ಮತ್ತು ಬೆಂಬಲವೇ ನಮ್ಮ ಶಕ್ತಿ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಸದಸ್ಯತ್ವ ಇಲ್ಲವಂತೆ
ಮಹಾದೇವಿ ಮೇಟಿ ಕಾಂಗ್ರೆಸ್ ಪಕ್ಷದ ಸದಸ್ಯರೇ ಅಲ್ಲವಂತೆ. ಅವರು ಈವರೆಗೂ ಸದಸ್ಯತ್ವ ಪಡೆದುಕೊಂಡಿಲ್ಲವಂತೆ. ಹೀಗೊಂದು ಸುದ್ದಿ ಪಕ್ಷದ ವಲಯದಲ್ಲಿಯೇ ಎದ್ದಿದೆ. ಇದನ್ನು ಮಹಾದೇವಿ ಮೇಟಿ ಸದಸ್ಯತ್ವ ಇದೆಯೋ ಇಲ್ಲವೋ ಎಂಬುದನ್ನು ಅವರೇ ಖಚಿತಪಡಿಸಬೇಕಿದೆ.

ಬೇರೆಯವರ ಪಾಲಾಗುತ್ತಾ ಕೈ ಟಿಕೆಟ್
ದಿ.ಎಚ್.ವೈ.ಮೇಟಿ ನಿಧನದ ಅನುಕಂಪ ಪಡೆದುಕೊಂಡು ಚುನಾವಣೆ ಗೆಲ್ಲುವುದಕ್ಕಾಗಿ ಕಾಂಗ್ರೆಸ್ ನಾಯಕರು ತಂತ್ರಗಾರಿಕೆ ಹೆಣೆದಿದ್ದಾರೆ. ಆದರೆ ಈ ಸಹೋದರ-ಸಹೋದರಿಯರ ಕಿತ್ತಾಟದಿಂದ ಅನುಕಂಪ ಮಾಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೇಟಿ ಕುಟುಂಬದ ಕೈ ತಪ್ಪಿ ಟಿಕೆಟ್ ಬೇರೆಯರ ಪಾಲಾಗುತ್ತಾ ಎಂಬ ಚರ್ಚೆಗಳು ಕೂಡ ಜೋರಾಗಿವೆ.

Related Posts

Leave a Reply

Your email address will not be published. Required fields are marked *