ರೇಷ್ಮೆ ಸಚಿವ ವೆಂಕಟೇಶ್ ಅವರು ಸದನದಲ್ಲಿ ಉತ್ತರ ನೀಡುವಾಗ ಟಿ. ನರಸಿಪುರದಲ್ಲಿರುವ KSIC ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಾಣದ ಪ್ರಸ್ತಾವನೆ ಕೈಬಿಡಲಾಗಿದೆ ಎಂದು ಘೋಷಿಸಿದ್ದರೂ, ಭೂಮಿಯ ದಾಖಲೆಗಳು ಇನ್ನೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲೇ ಉಳಿದಿರುವುದು ಅನವಶ್ಯಕ ಗೊಂದಲಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ತಿಳಿಸಿದ್ದಾರೆ.
ಕರ್ನಾಟಕದ ಹೆಮ್ಮೆಯ ಪ್ರತೀಕವಾದ ಮೈಸೂರು ಸಿಲ್ಕ್ ಗೆ ಸಂಬಂಧಿಸಿದ ಸಂಸ್ಥೆಯ ವಿಷಯದಲ್ಲಿ ಇಂತಹ ವಿಳಂಬ ಮತ್ತು ಅನಿಶ್ಚಿತತೆ ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯೆ ಪ್ರವೇಶಿಸಿ, ಆ ಭೂಮಿಯ ಹಕ್ಕುಪತ್ರಗಳನ್ನು ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೊರೇಷನ್ (KSIC) ಗೆ ವರ್ಗಾಯಿಸುವಂತೆ ಕ್ರಮ ಕೈಗೊಳ್ಳಬೇಕು. ಈ ಪ್ರಕ್ರಿಯೆಯನ್ನು ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸಲು ಮೈಸೂರು ಜಿಲ್ಲಾಧಿಕಾರಿಗಳಿಗೆ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ನಿರ್ದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಶೋಕ, ಕರ್ನಾಟಕದ ರೇಷ್ಮೆ ಕ್ಷೇತ್ರದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕೆಲವು ದೂರದೃಷ್ಟಿಯ ನಿರ್ಧಾರಗಳನ್ನು ಕೈಗೊಳ್ಳಬೇಕು. KSIC ಕಾರ್ಖಾನೆಯ ಸಮೀಪದಲ್ಲಿ 500 ಎಕರೆ ಭೂಮಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ “ಸಿಲ್ಕ್ ಸಿಟಿ” ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಬೇಕು ಎಂಬುದು ನನ್ನ ಸಲಹೆ ಎಂದಿದ್ದಾರೆ.
ಈ “ಸಿಲ್ಕ್ ಸಿಟಿ” ಮುಂದಿನ ದಿನಗಳಲ್ಲಿ ರೇಷ್ಮೆ ವ್ಯಾಪಾರ ಮತ್ತು ಜಾಗತಿಕ ಮಾರುಕಟ್ಟೆ ಅಭಿವೃದ್ಧಿ , ನೇಕಾರರ ಮತ್ತು ಕುಶಲಕರ್ಮಿಗಳ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ, ಕರ್ನಾಟಕದ ಶ್ರೀಮಂತ ರೇಷ್ಮೆ ಪರಂಪರೆಯನ್ನು ಪರಿಚಯಿಸುವ ಪ್ರವಾಸೋದ್ಯಮ, GI ಟ್ಯಾಗ್ ಹೊಂದಿರುವ ಮೈಸೂರು ಸಿಲ್ಕ್ ಮಾರುಕಟ್ಟೆಯ ವಿಸ್ತರಣೆ ಸೇರಿದಂತೆ ರೇಷ್ಮೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಬಲ್ಲದು. ಕರ್ನಾಟಕಕ್ಕೆ ಶತಮಾನಗಳಷ್ಟು ಹಳೆಯ ರೇಷ್ಮೆ ಪರಂಪರೆ ಇದೆ. ಸರಿಯಾದ ದೃಷ್ಟಿಕೋನ ಇದ್ದರೆ ಮತ್ತು ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಪಡಿಸಿದರೆ ಮೈಸೂರು ವಿಶ್ವದ ಮಟ್ಟದಲ್ಲಿ ಸಿಲ್ಕ್ ರಾಜಧಾನಿಯಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯ ಸರ್ಕಾರ KSIC ಭೂಮಿಯನ್ನು ರಕ್ಷಿಸಿ, ರೇಷ್ಮೆ ಪರಿಸರ ವ್ಯವಸ್ಥೆಯನ್ನು ಬಲಪಡಿಸಿ, ರೈತರು, ನೇಕಾರರು, ವ್ಯಾಪಾರಿಗಳು ಮತ್ತು ರಾಜ್ಯದ ಆರ್ಥಿಕತೆಗೆ ದೀರ್ಘಕಾಲಿಕವಾಗಿ ಉಪಯೋಗವಾಗುವಂತಹ ವ್ಯವಸ್ಥೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.


