ಬೀದರ್‌ನ ಮೈಲೂರಿನ ವ್ಯಕ್ತಿಯೊಬ್ಬರು ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕುದುರೆ ಜಾಡಿಸಿ ಒದ್ದ ಪರಿಣಾಮ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಬೀದರ್‌ನ ಮೈಲೂರಿನ ಜಮ್ಮಿ ಕಾಲನಿ ನಿವಾಸಿ ವೈಜನಾಥ (60) ಎಂದು ಗುರುತಿಸಲಾಗಿದೆ. ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ವೈಜನಾಥ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಈ ದಾರುಣ ಘಟನೆ ನಡೆದಿದೆ.
ವೈಜನಾಥ ಅವರು ಬೀದರ್ ಸಮೀಪದ ಚಿದ್ರಿ ಪ್ರದೇಶದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಸಂಜೆ ವೇಳೆ ಮೈಲೂರಿನತ್ತ ನಡೆದುಕೊಂಡು ಹೋಗುತ್ತಿದ್ದರು. ರಿಂಗ್ ರಸ್ತೆಯ ಮೂಲಕ ಮನೆಗೆ ತೆರಳುತ್ತಿದ್ದಾಗ ಅಕಸ್ಮಿಕವಾಗಿ ಹಿಂದಿನಿಂದ ಬಂದ ಕುದುರೆಯೊಂದು ಜಾಡಿಸಿ ಅವರಿಗೆ ಬಲವಾಗಿ ಒದ್ದಿದೆ. ಕುದುರೆಯ ಹೊಡೆತ ತುಂಬಾ ಬಲವಾಗಿದ್ದರಿಂದ ಅವರ ತಲೆಗೆ ಗಂಭೀರ ಗಾಯವಾಗಿದೆ. ನೆಲಕ್ಕೆ ಬಿದ್ದು ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು.
ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೈದರಾಬಾದ್‌ನ ಆಸ್ಪತ್ರೆಗೆ ಕಳುಹಿಸುವಂತೆ ಸಲಹೆ ನೀಡಿದರು. ಆಂಬ್ಯುಲೆನ್ಸ್ ಮೂಲಕ ಹೈದರಾಬಾದ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ವೈಜನಾಥ ಅಸು ನೀಗಿದ್ದಾರೆ.


