Menu

ಮಧ್ಯಪ್ರಾಚ್ಯ ಪ್ರಕ್ಷುಬ್ಧ: ಭಾರತ ನಿಲುವು ಸ್ಪಷ್ಟಪಡಿಸಬೇಕಿದೆ

ಮಧ್ಯ ಪ್ರಾಚ್ಯದಲ್ಲಿ ರಣಭೀಕರ ಯುದ್ದ ಮುಂದುವರಿದಿರುವಾಗ ಇದು ಭಾರತೀಯ ಸಂಸತ್ತಿನಲ್ಲಿ ಚರ್ಚೆಯಾಗಬಾರದೆಂದರೆ ಹೇಗೆ ? ಕೇಂದ್ರ ಸರ್ಕಾರವೇ ಈ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾವನೆಯನ್ನು ಮಂದಿಟ್ಟು ಚರ್ಚೆಗೆ ಮುಂದಾಗಬೇಕಿತ್ತು . ಈ ಹಿಂದೆ ಇಂತಹ ಸನ್ನಿವೇಶದಲ್ಲಿ ಅಮೆರಿಕ ಮತ್ತು ಇರಾಕ್ ನಡುವಣ ಯುದ್ಧ ನಡೆದಾಗ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂಸತ್ತಿನಲ್ಲಿ ಮುಕ್ತ ಚರ್ಚೆ ನಡೆಸಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಈ ವಿಚಾರದಲ್ಲಿ ಕೇಂದ್ರದ ನೀತಿಯಲ್ಲಿ ಸ್ಪಷ್ಟತೆ ಇಲ್ಲ.

ಮಧ್ಯ ಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ವಿಷಮಿಸಿದೆ. ದಾಳಿ, ಪ್ರತಿದಾಳಿ ಪರಿಣಾಮವಾಗಿ ಇಲ್ಲಿ ಎಲ್ಲವೂ ರಣಭೀಕರವಾಗಿದೆ. ಕೊಲ್ಲಿ ದೇಶಗಳ ನಾಗರಿಕರೂ ಸೇರಿದಂತೆ ವಿವಿಧ ದೇಶಗಳಿಂದ ಇಲ್ಲಿಗೆ ಬಂದು ವಾಸವಾಗಿರುವ ಕೋಟ್ಯಂತರ ಮಂದಿ ಪರಿಸ್ಥಿತಿ ದಾರುಣ ಮತ್ತು ಚಿಂತಾಜನಕವಾಗಿದೆ . ಇಸ್ರೇಲ್- ಇರಾನ್ ನಡುವಣ ತಲೆಯೆತ್ತಿರುವ ಯುದ್ಧ ಸದ್ಯ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ತಲ್ಲಣಗೊಂಡಿದೆ.

ತೈಲ ಬೆಲೆ ಭಾರತದಲ್ಲಿ ಏರುಪೇರಾಗಿದೆ. ರೂಪಾಯಿ ಬೆಲೆ ಪಾತಾಳ ತಲುಪಿದೆ. ಕಚ್ಚಾ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಸಕಾಲದಲ್ಲಿ ಪೂರೈಕೆಯಾಗಬೇಕಿದ್ದ ಅಡುಗೆ ಅನಿಲಕ್ಕೆ ಹೋಟೆಲ್ ಉದ್ಯಮಿಗಳು ಪರದಾಡುವಂತಾಗಿದೆ. ಕೊಲ್ಲಿ ದೇಶಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ವಿವಿಧ ಬಗೆಯ ನೌಕರಿ ಮಾಡುತ್ತಿರುವ ಲಕ್ಷಾಂತರ ಕುಟುಂಬಗಳ ಪರಿಸ್ಥಿತಿಯ ಬಗ್ಗೆ ದೇಶಕ್ಕೆ ಸರಿಯಾದ ಮಾಹಿತಿಯಿಲ್ಲ ಎಂಬ ಆಕ್ಷೇಪವಿದೆ .ಈ ದಿಶೆಯಲ್ಲಿ ವಿದೇಶಾಂಗ ಇಲಾಖೆ ಮತ್ತು ಕೊಲ್ಲಿ ದೇಶದಲ್ಲಿರುವ ರಾಯಭಾರಿ ಕಚೇರಿಗಿರುವ ಮಾಹಿತಿಯೇ ಗುರುತರ ಮತ್ತು ಅಧಿಕೃತ.

ಕೊಲ್ಲಿ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಪ್ರಜೆಗಳ ಪೈಕಿ ದಕ್ಷಿಣ ಭಾರತದ ಕೇರಳ , ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕದ ರಾಜ್ಯಗಳಿಂದ ತೆರಳಿದ ಪ್ರಜೆಗಳ ಸಂಖ್ಯೆಯೇ ಅಧಿಕ. ಇವರಲ್ಲಿ ಬಹುತೇಕ ಮಂದಿ ತಮ್ಮ ಬಂಧು ಬಳಗದವರಿಗೆ ಸಂಪರ್ಕಿಸಿ ನೆರವಿಗಾಗಿ ದುಂಬಾಲು ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಪರಸ್ಪರ ಸಹಕಾರ ಮತ್ತು ನೆರವು ಅವಶ್ಯ. ರಾಜ್ಯಗಳ ನೆರವು ಪಡೆದು ಅಲ್ಲಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಆಗಬೇಕಿರುವ ಮಾರ್ಗೋಪಾಯಗಳನ್ನು ಸರ್ಕಾರಗಳಿಂದು ಪ್ರಾಮಾಣಿಕವಾಗಿ ಆಲೋಚಿಸಬೇಕಿದೆ. ಮಿಗಿಲಾಗಿ ದೇಶದ ಸಂಸತ್ ಕಲಾಪಗಳಿಂದು ಜಾರಿಯಲ್ಲಿರುವಾಗ ಈ ಕುರಿತ ವಾಸ್ವವ ಸಂಗತಿಗಳ ಚರ್ಚೆ ಅನಿವಾರ್ಯ.

ವಿದೇಶಾಂಗ ಸಚಿವರು ಈ ದಿಶೆಯಲ್ಲಿ ಲಿಖಿತ ಹೇಳಿಕೆಗಳನ್ನು ಓದಿದರೆ ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದರಲ್ಲಿ ತಪ್ಪೇನಿದೆ? ಕೊಲ್ಲಿ ದೇಶಗಳಲ್ಲಿ ರಣಭೀಕರ ಯುದ್ದ ಮುಂದುವರಿದಿರುವಾಗ ಇದು ಭಾರತೀಯ ಸಂಸತ್ತಿನಲ್ಲಿ ಚರ್ಚೆ ಆಗಬಾರದು ಎಂದರೆ ಹೇಗೆ ?  ಕೇಂದ್ರ ಸರ್ಕಾರವೇ ಈ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾವನೆಯನ್ನು ಮಂದಿಟ್ಟು ಚರ್ಚೆಗೆ ಮುಂದಾಗಬೇಕಿತ್ತು . ಈ ಹಿಂದೆ ಇಂತಹ ಸನ್ನಿವೇಶದಲ್ಲಿ ಅಮೆರಿಕ- ಇರಾಕ್ ಯುದ್ಧ ನಡೆದಾಗ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂಸತ್ತಿನಲ್ಲಿ ಮುಕ್ತ ಚರ್ಚೆನಡೆಸಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಈ ವಿಷಯ ಕುರಿತು ದೇಶದ ಸಂಸತ್ತಿನಲ್ಲಿ ಚಚೆ ಆಗಬೇಕಿರುವುದು ಕೇವಲ ಭಾರತೀಯರ ಸಂರಕ್ಷಣೆ ಮತ್ತು ನೆರವು ಕಾರ್ಯಗಳಿಗೆ ಸೀಮಿತ ಆಗಲ್ಲ. ಒಟ್ಟಾರೆ ಇಂದಿನ ಯುದ್ಧದ ತಲ್ಲಣಗಳಿಗೆ ಭಾರತವು ಹೇಗೆ ಪ್ರತಿತಿಕ್ರಿಯಿಸುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ತಲುಪಿಸುವ ಸಲುವಾಗಿ. ಈ ವಿಚಾರದಲ್ಲಿ ಕೇಂದ್ರದ ನೀತಿಯಲ್ಲಿ ಸ್ಪಷ್ಟತೆ ಇಲ್ಲ.

Related Posts

Leave a Reply

Your email address will not be published. Required fields are marked *