Menu

ಡಿಸಿಎಂ ಮೇಲೆ ನಿಗಾಕ್ಕೆ ಸಿಎಂ ತಂಡ ರಚನೆ: ವರದಿ ಪ್ರಕಟಿಸಿದ ಮಾಧ್ಯಮ ವಿರುದ್ಧ ಕ್ರಮ ಕೈಗೊಳ್ಳಿ ಎಂದ ಆರ್‌ ಅಶೋಕ

ಸಿಎಂ @siddaramaiah ಅವರೇ, ಗುಪ್ತಚರ ಇಲಾಖೆಯ ದುರ್ಬಳಕೆ ಆಗುತ್ತಿದೆ ಎನ್ನುವುದು ನನ್ನ ವೈಯಕ್ತಿಕ ಆರೋಪವಲ್ಲ. ಈ ವರದಿಯನ್ನು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು ತನ್ನ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಪ್ರಕಟಿಸಿದೆ. ತಮಗೆ ಈ ವರದಿಯ ಬಗ್ಗೆ ಆಕ್ಷೇಪವಿದ್ದರೆ, ವರದಿ ಪ್ರಕಟಿಸಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು, ಆ ವರದಿಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ವಿರುದ್ಧವಲ್ಲ ಎಂದು ಆರ್‌ ಅಶೋಕ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಫೊಸ್ಟ್‌ ಮಾಡಿರುವ ಅವರು, ವರದಿಯಲ್ಲಿರುವ ಗಂಭೀರ ಅಂಶಗಳಿಗೆ ನೇರವಾಗಿ ಉತ್ತರಿಸುವ ಬದಲು, ತಾವು ಕ್ಷುಲ್ಲಕ, ಅಸಂಬದ್ಧ ರಾಜಕೀಯ ವಾಗ್ದಾಳಿ ನಡೆಸಲು ಮುಂದಾಗಿದ್ದೀರಿ. ನಿಮ್ಮ ಈ ಪ್ರತಿಕ್ರಿಯೆಯೇ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಒಂದು ವೇಳೆ ವರದಿ ಸುಳ್ಳಾಗಿದ್ದರೆ, ಅದನ್ನು ಸ್ಪಷ್ಟವಾಗಿ ನಿರಾಕರಿಸಿ ಪತ್ರಿಕೆಯಿಂದ ಸ್ಪಷ್ಟೀಕರಣ ಕೇಳಿ. ಅದನ್ನು ಬಿಟ್ಟು, ವಿಷಯಕ್ಕೆ ಸಂಬಂಧವೇ ಇಲ್ಲದಂತೆ ವಿರೋಧ ಪಕ್ಷದ ಮೇಲೆ ಹರಿಹಾಯುವುದು ಸಂಶಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಶಾಸಕರ ಚಟುವಟಿಕೆಗಳ ಬಗ್ಗೆ ನಿರಂತರ ಮಾಹಿತಿ ನೀಡುವಂತೆ ರಾಜ್ಯ ಗುಪ್ತಚರ ಇಲಾಖೆಗೆ ಸೂಚಿಸಲಾಗಿದೆ ಎಂದು ಆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಪದಗಳು ನಮ್ಮ ಸೃಷ್ಟಿಯಲ್ಲ, ಇವು ಸಾರ್ವಜನಿಕ ವಲಯದಲ್ಲಿರುವ ಮಾಧ್ಯಮ ವರದಿಯ ಭಾಗವಾಗಿದೆ.ಇಂತಹ ಗಂಭೀರ ವಿಷಯಗಳು ಮುನ್ನೆಲೆಗೆ ಬಂದಾಗ, ವಿರೋಧ ಪಕ್ಷದ ನಾಯಕನಾಗಿ ಅದರ ಬಗ್ಗೆ ಸ್ಪಷ್ಟತೆ ಕೇಳುವುದು ನನ್ನ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಜನರ ಮುಂದೆ ಸತ್ಯಾಂಶಗಳನ್ನು ಇಡುವ ಬದಲು, ತಾವು ಯಾವುದೋ ಹಳೆಯ ಇತಿಹಾಸವನ್ನು ಕೆದಕಿ, ಸಂಬಂಧವಿಲ್ಲದ ರಾಷ್ಟ್ರೀಯ ನಾಯಕರನ್ನು ಎಳೆದು ತರುವ ಮೂಲಕ ವಿಷಯಾಂತರ ಮಾಡಲು ಯತ್ನಿಸುತ್ತಿರುವುದು ತಾವು ವರದಿಯಿಂದ ಗಲಿಬಿಲಿಗೊಂಡಿರುವುದನ್ನ ಸ್ಪಷ್ಟವಾಗಿ ತೋರಿಸುತ್ತದ ಎಂದಿದ್ದಾರೆ.

ನನ್ನ ಪ್ರಶ್ನೆ ಅತ್ಯಂತ ನೇರ ಮತ್ತು ಸರಳವಾಗಿದೆ. ರಾಜ್ಯ ಗುಪ್ತಚರ ಇಲಾಖೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಳಸಲಾಗುತ್ತಿದೆಯೇ ಅಥವಾ ಕಾಂಗ್ರೆಸ್ ಪಕ್ಷದ ಆಂತರಿಕ ಬಣ ರಾಜಕೀಯವನ್ನು ನಿಭಾಯಿಸಲು ಬಳಸಿಕೊಳ್ಳ ಲಾಗುತ್ತಿದೆಯೇ? ಕರ್ನಾಟಕದ ಜನತೆಗೆ ಇದಕ್ಕೆ ನೇರ ಮತ್ತು ಪ್ರಾಮಾಣಿಕ ಉತ್ತರ ಬೇಕಿದೆ. ಕರ್ನಾಟಕವು ಇಂದು ಡ್ರಗ್ಸ್ ಜಾಲ, ಕೋಮುದಳ್ಳುರಿಗಳು, ನಿರುದ್ಯೋಗದ ವಿರುದ್ಧ ಯುವಕರ ಹೋರಾಟ, ಸಾರಿಗೆ ನೌಕರರ ಮುಷ್ಕರ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರ ಮುಷ್ಕರ ಸೇರಿದಂತೆ ಅನೇಕ ಕಾನೂನು ಸುವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿರುವಾಗ, ಸರ್ಕಾರದ ಮುಖ್ಯಸ್ಥರಾದ ತಮ್ಮ ಆದ್ಯತೆ ಆಡಳಿತದ ಮೇಲಿರಬೇಕೇ ಹೊರತು ಆಂತರಿಕ ಕಚ್ಚಾಟ, ರಾಜಕೀಯ ಮೇಲಾಟದ ಮೇಲಲ್ಲ ಎಂದು ತಿಳಿಸಿದ್ದಾರೆ.

ಮಧ್ಯಮ ವರದಿಯ ಆಧಾರದ ಮೇಲೆ ಉತ್ತರದಾಯಿತ್ವವನ್ನು ಕೇಳುವುದು ಹತಾಶೆಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷದ ಕರ್ತವ್ಯ. ನನ್ನ ಪ್ರಶ್ನೆಗಳು ತಮ್ಮನ್ನು ಮುಜುಗರಕ್ಕೀಡು ಮಾಡಿದರೆ, ಅದಕ್ಕೆ ನಾನು ಜವಾಬ್ದಾರನಲ್ಲ.ಕರ್ನಾಟಕದ ಜನತೆಗೆ ಬೇಕಿರುವುದು ಪಾರದರ್ಶಕತೆಯೇ ಹೊರತು ರಾಜಕೀಯ ನಾಟಕವಲ್ಲ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *